ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆಗಳ (ಎಪಿವೈ) ಅಡಿಯಲ್ಲಿ ನೋಂದಾಯಿಸಿಕೊಂಡ ಚಂದಾದಾರರ ಒಟ್ಟು ಸಂಖ್ಯೆ 6.62 ಕೋಟಿಗೆ ಏರಿಕೆಯಾಗಿದೆ ಮತ್ತು ಇದರ ಒಟ್ಟು ಮೌಲ್ಯ (ಎಯುಎಂ) 10 ಲಕ್ಷ ಕೋಟಿ ರೂ.ಗೆ ತಲುಪಿದೆ. ಆಗಸ್ಟ್ 25, 2023 ರಂತೆ ಎಯುಎಂ ವಿಷಯದಲ್ಲಿ ಎನ್ಪಿಎಸ್ ಮತ್ತು ಎಪಿವೈನ ವಿಭಾಗವಾರು ಸ್ಥಿತಿ ಈ ಕೆಳಗಿನಂತಿದೆ.
ಕೇಂದ್ರ ಸರ್ಕಾರದ ಎಯುಎಂ 2,40,902 ರೂ. ಆಗಿದ್ದು, ಇದರಲ್ಲಿ ಕೇಂದ್ರ ಸ್ವಾಯತ್ತ ಸಂಸ್ಥೆಗಳಿಗೆ (ಸಿಎಬಿ) 42,246 ರೂ., ರಾಜ್ಯ ಸರ್ಕಾರಗಳಿಗೆ 4,36,071 ರೂ., ರಾಜ್ಯ ಸ್ವಾಯತ್ತ ಸಂಸ್ಥೆಗಳಿಗೆ 63,133 ರೂ. ಆಗಿದೆ. ಕಾರ್ಪೊರೇಟ್ಗಳಿಗೆ ಇದು 1,35,218 ರೂ., ಎಲ್ಲಾ ನಾಗರಿಕ ಮಾದರಿಗೆ ಎಯುಎಂ 47,663 ರೂ., ಎನ್ಪಿಎಸ್ ಲೈಟ್ಗೆ 5,157 ರೂ., ಅಟಲ್ ಪಿಂಚಣಿ ಯೋಜನೆಗೆ ಎಯುಎಂ 30,051 ರೂ. ಇದೆ.
ಜನವರಿ 1, 2004 ರಂದು ಅಥವಾ ನಂತರ ಕೇಂದ್ರ ಸರ್ಕಾರಿ ಸೇವೆಗಳಿಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಎನ್ಪಿಎಸ್ ಜಾರಿಗೆ ತರಲಾಗಿದೆ. ಹೆಚ್ಚಿನ ರಾಜ್ಯ ಸರ್ಕಾರಗಳು ತಮ್ಮ ಹೊಸ ಉದ್ಯೋಗಿಗಳಿಗೆ ಎನ್ಪಿಎಸ್ ಯೋಜನೆಯನ್ನು ಅಳವಡಿಸಿಕೊಂಡಿವೆ. ಎನ್ಪಿಎಸ್ ಅನ್ನು ಮೇ 1, 2009 ರಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.
ಇದಲ್ಲದೆ, ಜೂನ್ 1, 2015 ರಿಂದ ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚು ಇಂಬು ನೀಡಿದೆ. ಪಿಂಚಣಿ ಮತ್ತು ನಿವೃತ್ತಿ ಯೋಜನೆಯನ್ನು ಉತ್ತೇಜಿಸುವ ಉದ್ದೇಶದಿಂದ ಪಿಎಫ್ಆರ್ಡಿಎ ಪ್ರತಿವರ್ಷ ಅಕ್ಟೋಬರ್ 1 ಅನ್ನು "ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿವಸ್ (ಎನ್ಪಿಎಸ್ ದಿವಸ್)" ಎಂದು ಆಚರಿಸಲಾಗುತ್ತಿದೆ. ಈ ವರ್ಷ ಎನ್ಪಿಎಸ್ ದಿನ ಆಚರಿಸಲು, ಪಿಎಫ್ಆಆರ್ಡಿಎ ಡಿಜಿಟಲ್ ಮಾಧ್ಯಮ ಮತ್ತು ಪ್ರಚಾರ ಉಪಕ್ರಮಗಳ ಒಂದು ತಿಂಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎನ್ಪಿಎಸ್ ಮತ್ತು ಎಪಿವೈ ಇವು ಅತ್ಯಂತ ಜನಪ್ರಿಯ ನಿವೃತ್ತಿ ಪಿಂಚಣಿ ಯೋಜನೆಗಳಾಗಿವೆ. ಇವು ಭಾರತೀಯ ನಾಗರಿಕರಿಗೆ ನಿವೃತ್ತಿಯ ನಂತರದ ಜೀವನಕ್ಕಾಗಿ ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಸಹಾಯ ಮಾಡುತ್ತವೆ. ಎರಡೂ ಯೋಜನೆಗಳನ್ನು ಒಂದೇ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದರೂ, ಎರಡರ ನಡುವೆ ಕೊಂಚ ವ್ಯತ್ಯಾಸವಿದೆ.
ಎಪಿವೈ ಇದು ಸರ್ಕಾರದ ಬೆಂಬಲಿತ ಪಿಂಚಣಿ ಯೋಜನೆಯಾದರೆ, ಎನ್ಪಿಎಸ್ ಭಾರತ ಸರ್ಕಾರವು 2004 ರಲ್ಲಿ ಪ್ರಾರಂಭಿಸಿದ ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಪಿಂಚಣಿ ನಿಧಿ, ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಈ ನಿಧಿಯನ್ನು ನಿಯಂತ್ರಿಸುತ್ತದೆ. 18 ರಿಂದ 65 ವರ್ಷದೊಳಗಿನ ಭಾರತದ ಎಲ್ಲಾ ನಾಗರಿಕರಿಗೆ ಎನ್ಪಿಎಸ್ ಲಭ್ಯವಿದೆ.
ಅಟಲ್ ಪಿಂಚಣಿ ಯೋಜನೆ ಭಾರತ ಸರ್ಕಾರದ ಬೆಂಬಲಿತ ಪಿಂಚಣಿ ಯೋಜನೆಯಾಗಿದ್ದು, ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ಔಪಚಾರಿಕ ಪಿಂಚಣಿ ಯೋಜನೆ ಪಡೆಯಲು ಸಾಧ್ಯವಾಗದ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾಗಿದೆ.
ಇದನ್ನೂ ಓದಿ : ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ 6.7ಕ್ಕೆ ಹೆಚ್ಚಿಸಿದ ಮೂಡೀಸ್ ಇನ್ವೆಸ್ಟರ್ಸ್