ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್ಓ) 2022-23ರಲ್ಲಿ ಸುಮಾರು 1.39 ಕೋಟಿ ನಿವ್ವಳ ಸಂಖ್ಯೆಯ ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 13.22 ರಷ್ಟು ಹೆಚ್ಚಳವಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 1.22 ಕೋಟಿ ನಿವ್ವಳ ಸದಸ್ಯರು ಸೇರ್ಪಡೆಯಾಗಿದ್ದರು. 2022-23 ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ನಲ್ಲಿ ಇಪಿಎಫ್ಓಗೆ 13.40 ಲಕ್ಷ ಸದಸ್ಯರು ಸೇರಿಕೊಂಡಿದ್ದಾರೆ.
ಈ ಸದಸ್ಯರಲ್ಲಿ ಸುಮಾರು 7.58 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್ಓ ವ್ಯಾಪ್ತಿಗೆ ಬಂದಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ 2.35 ಲಕ್ಷ ಸದಸ್ಯರು 18 ರಿಂದ 21 ವರ್ಷ ವಯಸ್ಸಿನವರಾಗಿದ್ದಾರೆ. ಇವರ ನಂತರ 22 ರಿಂದ 25 ವರ್ಷ ವಯಸ್ಸಿನವರು 1.94 ಲಕ್ಷ ಜನ ಸದಸ್ಯರಾಗಿದ್ದಾರೆ. 18 ರಿಂದ 25 ವರ್ಷದ ವಯೋಮಾನದವರು ತಿಂಗಳಿನಲ್ಲಿ ಸೇರ್ಪಡೆಯಾದ ಒಟ್ಟು ಹೊಸ ಸದಸ್ಯರಲ್ಲಿ ಶೇಕಡಾ 56.60 ರಷ್ಟಿದ್ದಾರೆ.
ಈ ವೇತನದಾರರ ದತ್ತಾಂಶದ ವಯಸ್ಸಿನ ವಾರು ಹೋಲಿಕೆಯು ದೇಶದ ಸಂಘಟಿತ ವಲಯದ ಉದ್ಯೋಗಿಗಳಿಗೆ ಸೇರುವ ಬಹುಪಾಲು ಸದಸ್ಯರು ಮೊದಲ ಬಾರಿಗೆ ಉದ್ಯೋಗ ಹುಡುಕುವವರು ಎಂಬುದನ್ನು ಸೂಚಿಸುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿದೆ. ಸರಿಸುಮಾರು 10.09 ಲಕ್ಷ ಸದಸ್ಯರು ಇಪಿಎಫ್‌ಒ ಸದಸ್ಯತ್ವಕ್ಕೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಡೇಟಾ ಎತ್ತಿ ತೋರಿಸಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ್ದಾರೆ ಮತ್ತು ಇಪಿಎಫ್ಓ ಅಡಿಯಲ್ಲಿ ಒಳಗೊಳ್ಳುವ ಸಂಸ್ಥೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಮತ್ತು ಅಂತಿಮ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಚಯಗಳನ್ನು ವರ್ಗಾಯಿಸಲು ಬಯಸಿದ್ದಾರೆ.
ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು ಮಾರ್ಚ್ 2023 ರಲ್ಲಿ ನಿವ್ವಳ ಮಹಿಳಾ ಸದಸ್ಯರ ದಾಖಲಾತಿ 2.57 ಲಕ್ಷವಾಗಿದೆ ಎಂದು ತೋರಿಸಿದೆ. ಇದು ತಿಂಗಳ ನಿವ್ವಳ ಸದಸ್ಯರ ಸೇರ್ಪಡೆಯ ಶೇಕಡಾ 19.21 ಆಗಿದೆ. ಇವರಲ್ಲಿ 1.91 ಲಕ್ಷ ಮಹಿಳಾ ಸದಸ್ಯರು ಹೊಸದಾಗಿ ಸೇರ್ಪಡೆಗೊಂಡವರು. ಇದು ಎಲ್ಲಾ ಹೊಸ ಸೇರ್ಪಡೆಗಳ ಸುಮಾರು 25.16 ಪ್ರತಿಶತ ಸೇರ್ಪಡೆಯಾಗಿದೆ.
ಹರ್ಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ ರಾಜ್ಯಗಳಲ್ಲಿ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ತಿಂಗಳಿನಿಂದ ತಿಂಗಳಿಗೆ ಬೆಳೆಯುತ್ತಿರುವ ಪ್ರವೃತ್ತಿಯು ಪ್ರತಿಫಲಿಸುತ್ತದೆ ಎಂದು ರಾಜ್ಯವಾರು ವೇತನದಾರರ ಅಂಕಿಅಂಶಗಳು ತೋರಿಸಿವೆ. ನಿವ್ವಳ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ ಮತ್ತು ಗುಜರಾತ್ ಇವು ಅಗ್ರ ಐದು ರಾಜ್ಯಗಳಾಗಿವೆ.
ಈ ರಾಜ್ಯಗಳು ಒಟ್ಟಾಗಿ ತಿಂಗಳ ಅವಧಿಯಲ್ಲಿ ನಿವ್ವಳ ಸದಸ್ಯರ ಸೇರ್ಪಡೆಯ 58.68 ಪ್ರತಿಶತವನ್ನು ಹೊಂದಿವೆ. ಎಲ್ಲಾ ರಾಜ್ಯಗಳಲ್ಲಿ, ಮಹಾರಾಷ್ಟ್ರವು 20.63 ಶೇಕಡಾ ನಿವ್ವಳ ಸದಸ್ಯರನ್ನು ಸೇರಿಸುವ ಮೂಲಕ ಮುಂಚೂಣಿಯಲ್ಲಿದೆ ಮತ್ತು ತಮಿಳುನಾಡು ರಾಜ್ಯವು ತಿಂಗಳ ಅವಧಿಯಲ್ಲಿ 10.83 ಶೇಕಡಾ ಪಾಲನ್ನು ಹೊಂದಿದೆ. ಉದ್ಯೋಗಿ ದಾಖಲೆಗಳನ್ನು ನವೀಕರಿಸುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಡೇಟಾ ಸಂಗ್ರಹಣೆ ಕೂಡ ನಿರಂತರ ಪ್ರಕ್ರಿಯೆಯಾಗಿರುತ್ತದೆ. ಹೀಗಾಗಿ ವೇತನದಾರರ ಡೇಟಾ ತಾತ್ಕಾಲಿಕವಾಗಿರುತ್ತದೆ. ಆದ್ದರಿಂದ ಹಿಂದಿನ ಡೇಟಾವನ್ನು ಪ್ರತಿ ತಿಂಗಳು ನವೀಕರಿಸಲಾಗುತ್ತದೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ