ನವದೆಹಲಿ: ಕ್ಯಾಪಿಟಲ್ ಮತ್ತು ಗ್ರಾಹಕ ಸರಕುಗಳ ತಯಾರಿಕೆಯ ಜೆಟ್ವರ್ಕ್ ಉತ್ಪಾದನಾ ಸಂಸ್ಥೆ ಟ್ರೇಡ್‌ಕ್ರೆಡ್‌ನೊಂದಿಗೆ 500 ಕೋಟಿ ರೂಪಾಯಿಗಳ ಒಪ್ಪಂದ ಮಾಡಿರುವುದಾಗಿ ಹೇಳಿದೆ. 13 ಕುಟುಂಬಗಳಿಗೆ ಸಂಬಂಧಿಸಿದ ಕಚೇರಿಗಳು ಈ ಹಣಕಾಸು ಒಪ್ಪಂದದ ಭಾಗವಾಗಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಜೆಟ್ವರ್ಕ್, ನಾವು ನಮ್ಮ ಪೂರೈಕೆ ಸರಪಳಿಯನ್ನು ಸದೃಢವಾಗಿಸುವತ್ತ ಗಮನಹರಿಸಲು ಬಯಸುತ್ತೇವೆ. ಇದು ವ್ಯವಸ್ಥೆಯನ್ನು ಸುಗಮಗೊಳಿಸುವ ಸಾಮರ್ಥ್ಯದ ಜೊತೆಗೆ ದೈನಂದಿನ ವ್ಯವಹಾರದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ತೋರಿಸುತ್ತದೆ. ನಮ್ಮ ಆರ್ಡರ್ ಪುಸ್ತಕ ಬೆಳೆಯುತ್ತಲೇ ಇದ್ದು, 5,200 ಕೋಟಿ ರೂಪಾಯಿಗಳಿಗೆ ದಾಟಿದೆ ಎಂದು ಮಾಹಿತಿ ನೀಡಿದೆ.
2021-22ರಲ್ಲಿ ನಾವು ಬಲವಾದ ಹಾಗೂ ಲಾಭದಾಯಕ ವ್ಯಾಪಾರ ಬೆಳವಣಿಗೆಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ ಎಂದು ಜೆಟ್ವರ್ಕ್ ಸಿಇಒ ಅಮೃತ್ ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. 500 ಕೋಟಿ ರೂಪಾಯಿಗಳ ಹಣಕಾಸು ಒಪ್ಪಂದವು ಜೆಟ್ವರ್ಕ್‌ನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಪೂರೈಕೆ ಸರಪಳಿಯನ್ನು ದೃಢವಾಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಡಿ1 ಕ್ಯಾಪಿಟಲ್ ಪಾಲುದಾರರ ನೇತೃತ್ವದಲ್ಲಿ ಸರಣಿ ಇ ಫಂಡಿಂಗ್ ಸುತ್ತಿನಲ್ಲಿ 150 ಮಿಲಿಯನ್ ಡಾಲರ್ ಸಂಗ್ರಹಿಸಿದ ನಂತರ ಜೆಟ್ವರ್ಕ್ ಇತ್ತೀಚೆಗೆ ಯೂನಿಕಾರ್ನ್ ಆಗಿ ಬದಲಾವಣೆಯಾಗಿತ್ತು.
ಟ್ರೇಡ್‌ಕ್ರೆಡ್ ಸಂಸ್ಥಾಪಕ ಮತ್ತು ಸಿಇಒ ಹಾರ್ದಿಕ್ ಶಾ ಮಾತನಾಡಿ, ಜಾಗತಿಕ ಉತ್ಪಾದನಾ ಕ್ಷೇತ್ರದಲ್ಲಿ ಮುಂದಿನ ಮೈಲಿಗಲ್ಲುಗಳನ್ನು ತಲುಪಿಸುವ ಈ ಪ್ರಯಾಣದಲ್ಲಿ ಪಾಲುದಾರಿಕೆ ಹೊಂದಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.