ಬೆಂಗಳೂರು : ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಹಬ್ ಆಗಿ ಮುಂದುವರಿಯುತ್ತಿರುವುದನ್ನು ಅಂಗೀಕರಿಸಿರುವ ವಾಲ್‍ಮಾರ್ಟ್, 2027ರ ವೇಳೆಗೆ ಭಾರತ ನಿರ್ಮಿತ ಉತ್ಪನ್ನಗಳನ್ನು ಪ್ರತಿ ವರ್ಷ 10 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುವ ಸಂಕಲ್ಪದೊಂದಿಗೆ ತನ್ನ ಒಟ್ಟಾರೆ ರಫ್ತು ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ.
ಪ್ರಸ್ತುತ ವಾಲ್‍ಮಾರ್ಟ್‍ನ ಹೊಸ ರಫ್ತು ಬದ್ಧತೆಯಿಂದಾಗಿ ಭಾರತದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‍ಎಂಇಗಳು) ಗಣನೀಯ ಪ್ರಮಾಣದಲ್ಲಿ ಉನ್ನತಿ ಪಡೆಯಲಿವೆ ಎಂಬ ನಿರೀಕ್ಷೆಗಳು ಇವೆ. ಇದರ ಜೊತೆಗೆ ಫ್ಲಿಪ್‍ಕಾರ್ಟ್ ಸಮರ್ಥ್ ಮತ್ತು ವಾಲ್‍ಮಾರ್ಟ್ ವೃದ್ಧಿ ಪೂರೈಕೆದಾರರ ಬೆಳವಣಿಗೆ ಕಾರ್ಯಕ್ರಮಗಳ ಮೂಲಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.
ಆಹಾರ, ಔಷಧಿ, ಗ್ರಾಹಕ ಬಳಕೆ ಉತ್ಪನ್ನಗಳು, ಆರೋಗ್ಯ ಮತ್ತು ಕ್ಷೇಮ ಹಾಗೂ ಸಾಮಾನ್ಯ ವ್ಯಾಪಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳ ನೂರಾರು ಹೊಸ ಪೂರೈಕೆದಾರರಿಗೆ ಬೆಳವಣಿಗೆ ಹೊಂದಲು ವಾಲ್‍ಮಾರ್ಟ್‍ನ ಈ ವಿಸ್ತರಣೆ ಕಾರ್ಯಕ್ರಮ ನೆರವಾಗಲಿದೆ. ಇದಿಷ್ಟೇ ಅಲ್ಲ, ಜವಳಿ, ಹೋಂವೇರ್ ಮತ್ತು ಇತರೆ ಪ್ರಮುಖ ಭಾರತೀಯ ರಫ್ತು ವಿಭಾಗಗಳಿಗೂ ನೆರವು ಸಿಗಲಿದೆ.
ವಾಲ್‍ಮಾರ್ಟ್ ಇಂಕ್‍ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೌಗ್ ಮ್ಯಾಕ್‍ಮಿಲನ್ ಅವರು ಮಾತನಾಡಿ,`ಅಂತಾರಾಷ್ಟ್ರೀಯ ರೀಟೇಲರ್ ಆಗಿರುವ ನಮ್ಮ ಸಂಸ್ಥೆಯು ವಿಶ್ವದಾದ್ಯಂತ ಗ್ರಾಹಕರು ಮತ್ತು ಸಮುದಾಯಗಳಿಗೆ ಮೌಲ್ಯ ತಂದು ಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ರೀಟೇಲ್ ಕ್ಷೇತ್ರದ ಯಶಸ್ಸಿಗೆ ಸ್ಥಳೀಯ ಉದ್ಯಮಿಗಳು ಮತ್ತು ತಯಾರಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ವಾಲ್‍ಮಾರ್ಟ್ ಅರ್ಥ ಮಾಡಿಕೊಂಡಿದೆ. ಮತ್ತು ವಾಲ್‍ಮಾರ್ಟ್ ಪೂರೈಸುತ್ತಿರುವ ಜಾಗತಿಕ ವಿತರಣಾ ಅವಕಾಶಗಳನ್ನು ಮತ್ತು ವಿನೂತನವಾದ ಮಾನದಂಡಗಳನ್ನು ಬಳಸಿಕೊಂಡು ಭಾರತೀಯ ಪೂರೈಕೆದಾರರು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳಲು ದೊಡ್ಡ ಮಟ್ಟದ ಅವಕಾಶಗಳಿವೆ’ ಎಂದು ತಿಳಿಸಿದರು.
ಓದಿ: ರಾಜ್ಯದಲ್ಲಿಂದು 1,238 ಮಂದಿಗೆ ಸೋಂಕು ದೃಢ; 12 ಮಂದಿ ಬಲಿ
ಮುಂಬರುವ ವರ್ಷಗಳಲ್ಲಿ ನಮ್ಮ ವಾರ್ಷಿಕ ಭಾರತ ರಫ್ತುಗಳನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸಲಿದ್ದೇವೆ. ಈ ಮೂಲಕ ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುತ್ತಿದ್ದೇವೆ ಮತ್ತು ಹೆಚ್ಚಿನ ಸ್ಥಳೀಯ ವ್ಯವಹಾರಗಳು ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತಿದ್ದೇವೆ. ಇದೇ ಸಮಯದಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮನೆಗಳಲ್ಲಿ ಸಮೃದ್ಧಿಯನ್ನು ಸೃಷ್ಟಿಸಲಿದ್ದೇವೆ. ವಾಲ್‍ಮಾರ್ಟ್‍ಗೆ ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಹೆಚ್ಚು ಉತ್ತಮ ಗುಣಮಟ್ಟದ ಭಾರತ ನಿರ್ಮಿತ ಅಂದರೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಪೂರೈಸಲು ಇದೊಂದು ಉತ್ತಮ ಅವಕಾಶ ಒದಗಿಬಂದಿದೆ ಎಂದು ಅವರು ಹೇಳಿದರು.
ಫ್ಲಿಪ್‍ಕಾರ್ಟ್ ಗ್ರೂಪ್‍ನ ಮುಖ್ಯ ಕಾರ್ಯಕಾರಿ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಮಾತನಾಡಿ, ಸಾವಿರಾರು ಭಾರತೀಯ ಬ್ರ್ಯಾಂಡ್‍ಗಳು, ಎಂಎಸ್‍ಎಂಇಗಳು ಮತ್ತು ಕುಶಲಕರ್ಮಿಗಳೊಂದಿಗೆ ಕೆಲಸ ಮಾಡಲು ಫ್ಲಿಪ್‍ಕಾರ್ಟ್‍ಗೆ ಸಂತಸವೆನಿಸುತ್ತಿದೆ. ಈ ಮೂಲಕ ಅವರ ವ್ಯವಹಾರಗಳನ್ನು ಯಶಸ್ವಿಗೊಳಿಸುವತ್ತ ಗಮನಹರಿಸಲಾಗುತ್ತದೆ. ಅವರಿಗೆ ಭಾರತದಾದ್ಯಂತದ ಮಾರುಕಟ್ಟೆಯನ್ನು ತಲುಪಲು ಮತ್ತು ತಮ್ಮ ಎಲ್ಲಾ ಪ್ರಮುಖ ಬ್ರ್ಯಾಂಡಿಂಗ್, ಮಾರುಕಟ್ಟೆ, ಲಾಜಿಸ್ಟಿಕ್ಸ್ ಮತ್ತು ಸಾಮಥ್ರ್ಯಗಳನ್ನು ಜಾಗತಿಕ ಮಾರುಕಟ್ಟೆವರೆಗೂ ಕೊಂಡೊಯ್ಯಲು ನಾವು ವೇದಿಕೆಯನ್ನು ಒದಗಿಸಿಕೊಡುತ್ತೇವೆ.
ಪರಿಸರ ಸರಪಳಿ ವ್ಯವಸ್ಥೆ ಅಭಿವೃದ್ಧಿ : ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭಾರತೀಯ ಕಂಪನಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಜಾಗತಿಕ ಮಟ್ಟಕ್ಕೆ ತಲುಪಿಸುವುದಕ್ಕಾಗಿ ಹೂಡಿಕೆ ಮಾಡುತ್ತಿರುವ ವಾಲ್‍ಮಾರ್ಟ್‍ನ ಕ್ರಮ ಸ್ವಾಗತಾರ್ಹವಾಗಿದೆ ಎಂದರು. ಭಾರತದ ತನ್ನ ರಫ್ತು ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ರಫ್ತುದಾರರನ್ನು ಉತ್ತೇಜಿಸುವ ಮೂಲಕ ಹಾಗೂ ದೇಶದ ರಫ್ತು ಸಿದ್ಧವಾದ ವ್ಯವಹಾರಗಳನ್ನು ವಿಸ್ತರಿಸುವುದರೊಂದಿಗೆ ವಾಲ್‍ಮಾರ್ಟ್ ಭಾರತದಲ್ಲಿ ತನ್ನ ಪೂರೈಕೆ ಸರಪಳಿಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವತ್ತ ಗಮನ ಹರಿಸಿದೆ.
ವಾಲ್‍ಮಾರ್ಟ್ 20 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಭಾರತದಿಂದ ಉತ್ಪನ್ನಗಳನ್ನು ಖರೀದಿಸುತ್ತಿದೆ. ಈ ಮೂಲಕ ಸ್ಥಳೀಯ ಪೂರೈಕೆದಾರರು ತಮ್ಮ ಕಾರ್ಯಾಚರಣೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಹಾಗೂ ಹೊಸ ಉತ್ಪನ್ನಗಳ ಅನ್ವೇಷಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಪೂರೈಕೆ ಜಾಲ ನಿರ್ವಹಣೆ ಹಾಗೂ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ.
ವಾಲ್‍ಮಾರ್ಟ್ ಜಾಗತಿಕ ಮಾರುಕಟ್ಟೆಯ ಬುದ್ಧಿವಂತಿಕೆ ಮತ್ತು ಬೇಡಿಕೆಯ ಮುನ್ಸೂಚನೆಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದು ಪೂರೈಕೆದಾರರಿಗೆ ಕಾರ್ಯತಂತ್ರದ ಯೋಜನೆಗೆ ಸಹಾಯ ಮಾಡುತ್ತದೆ. ಈ ಬೆಂಬಲವು ವೆಲ್ಸ್ ಪನ್, ಎಲ್‍ಟಿ ಫುಡ್ಸ್ ಹಾಗೂ ಅನಿಕೇತ್ ಮೆಟಲ್ಸ್ ಸೇರಿದಂತೆ ನೂರಾರು ಕಂಪನಿಗಳ ಜಾಗತಿಕ ಯಶಸ್ಸಿಗೆ ಕಾರಣವಾಗಿದೆ. ಇದರ ಜೊತೆಗೆ ಗ್ಲೋಬಲ್ ಗ್ರೀನ್ ಕಂಪನಿಯಂತಹ ವೇಗವಾಗಿ ಬೆಳೆಯುತ್ತಿರುವ ರಫ್ತು ವ್ಯವಹಾರಗಳ ಸಂಸ್ಥೆಗಳೊಂದಿಗೂ ಸಹಭಾಗಿತ್ವವನ್ನು ಹೊಂದಿದೆ.
ವೆಲ್ಸ್ ಪನ್ ಇಂಡಿಯಾ ಲಿಮಿಟೆಡ್‍ನ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದೀಪಾಲಿ ಗೊಯಾಂಕಾ ಅವರು ಮಾತನಾಡಿ, 1998 ರಿಂದ ನಾವು ವಾಲ್‍ಮಾರ್ಟ್‍ನ ಪೂರೈಕೆದಾರರಾಗಿದ್ದೇವೆ. ಅಂದಿನಿಂದ ವೆಲ್ಸ್ ಪನ್ ವಿಶ್ವದ ಅತಿ ದೊಡ್ಡ ಹೋಂ ಟೆಕ್ಸ್ಟೈಲ್ಸ್ ತಯಾರಕ ಸಂಸ್ಥೆಯಾಗಿ ಬೆಳೆದಿದ್ದು, ಶೇ.94 ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ನಮ್ಮಲ್ಲಿ 20,000 ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಲಾಗಿದ್ದು, ಇವರಲ್ಲಿ ಶೇ.25 ರಷ್ಟು ಮಂದಿ ಮಹಿಳೆಯರಿದ್ದಾರೆ ಎಂದು ತಿಳಿಸಿದರು.
ಓದಿ: 56 ಹಿರಿಯ ಅಧಿಕಾರಿಗಳನ್ನು ವಜಾ ಮಾಡಿದ ವಾಲ್ ಮಾರ್ಟ್ ಇಂಡಿಯಾ
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ವ್ಯವಹಾರಗಳು ಬದಲಾವಣೆಯ ಪ್ರತಿನಿಧಿಗಳಾಗಿವೆ. ಮತ್ತು ನಾವು ಗುಣಮಟ್ಟ, ಸುಸ್ಥಿರತೆ ಹಾಗೂ ವೈವಿಧ್ಯತೆ, ಅಂತರ್ಗತತೆಯ ಮೇಲೆ ನಮ್ಮ ಗಮನವನ್ನು ತೀಕ್ಷ್ಣಗೊಳಿಸಲು ವಾಲ್‍ಮಾರ್ಟ್‍ನೊಂದಿಗೆ ನಮ್ಮ ಸಂಬಂಧವನ್ನು ಹತೋಟಿಗೆ ತರಲು ನಮಗೆ ಸಾಧ್ಯವಾಗಿದೆ. ವೆಲ್ಸ್‍ಪನ್ ಒಂದು ಸ್ವದೇಶಿ ಬ್ರ್ಯಾಂಡ್ ಆಗಿದ್ದು, ಇದು ಮೇಕ್ ಇನ್ ಇಂಡಿಯಾ ಕತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸುತ್ತದೆ. ಅಲ್ಲದೇ, ಸವಾಲಿನ ಸಮಯದಲ್ಲಿ ನಾವು ಪಾಲುದಾರರಾಗಿ ಒಟ್ಟಾಗಿದ್ದೇವೆ. ವಾಲ್‍ಮಾರ್ಟ್ ಭಾರತೀಯ ಪೂರೈಕೆದಾರರಿಗೆ ವಿಸ್ತರಣೆ ಮಾಡಿದ ಬದ್ಧತೆಯೊಂದಿಗೆ ನಾವು ಭವಿಷ್ಯದಲ್ಲಿಯೂ ಒಟ್ಟಾಗಿ ಮುನ್ನಡೆಸುತ್ತಿದ್ದೇವೆ’ ಎಂದು ಹೇಳಿದರು.