ಮುಂಬೈ: ಆರ್ಥಿಕ ಹಿಂಜರಿತದಿಂದ ಭಾರತೀಯ ಉದ್ಯಮ ವಲಯಗಳು ಕಂಗಾಲಾಗಿರುವಂತೆಯೇ ಇತ್ತ ಲಾಕ್ಡೌನ್ ಗಾಯದ ಮೇಲೆ ಬರೆ ಎಂಬಂತೆ ಆರ್ಥಿಕತೆಯನ್ನು ಇನ್ನಷ್ಟು ಪಾತಾಳಕ್ಕೆ ಕರೆದೊಯ್ಯುತ್ತಿದೆ. ಇಂದು ರೂಪಾಯಿ ಮೌಲ್ಯ ಸಾರ್ವಕಾಲಿಕ ಪ್ರಮಾಣದಲ್ಲಿ ಕುಸಿತ ದಾಖಲಿಸಿದೆ.
ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರದ ವಹಿವಾಟಿನಂದು ಅಮೆರಿಕದ ಡಾಲರ್ ವಿರುದ್ಧ 43 ಪೈಸೆ ಕುಸಿದು 76.87ಕ್ಕೆ ತಲುಪಿದೆ. ಕೋವಿಡ್ 19 ನಿಯಂತ್ರಿಸಲು ರಾಷ್ಟ್ರವ್ಯಾಪಿ ವಿಧಿಸಲಾಗಿರುವ ಲಾಕ್ಡೌನ್ ಈ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಮಾರುಕಟ್ಟೆಗಳಲ್ಲಿನ ಅಪಾಯದ ದುರ್ಬಲಗೊಳ್ಳುತ್ತಿರುವ ಮಧ್ಯೆ ಹೂಡಿಕೆದಾರರು ಸುರಕ್ಷಿತ ತಾಣವಾದ ಗ್ರೀನ್‌ಬ್ಯಾಕ್‌ನತ್ತ ಮುಖಮಾಡಿದ್ದಾರೆ. ತತ್ಪರಿಣಾಮ ರೂಪಾಯಿ ಮೌಲ್ಯದಲ್ಲಿನ ದೌರ್ಬಲ್ಯವು ಅಮೆರಿಕದ ಡಾಲರ್ ವೃದ್ಧಿಯಾಗುವುದಕ್ಕೆ ಕಾರಣವಾಗಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ 76.75 ರೂ.ಗೆ ದುರ್ಬಲಗೊಂಡಿತು. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ 76.87 ರೂ.ಗೆ ತಲುಪಿತು. ಈ ಹಿಂದಿನ ವಹಿವಾಟಿನ ದಿನ ಕೊನೆಗೊಂಡಿದ್ದಕ್ಕಿಂತ ಇಂದು 43 ಪೈಸೆಯಷ್ಟು ಕುಸಿತ ದಾಖಲಿಸಿದೆ.