ಹೈದರಾಬಾದ್: ಹಣದ ಅಗತ್ಯವಿದ್ದಾಗ ಅನೇಕರು ಚಿನ್ನವನ್ನು ಅಡವಿಟ್ಟು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಾರೆ. ಸಾಲವನ್ನು ತೆಗೆದುಕೊಳ್ಳುವ ಸಂದರ್ಭ ನಾಮಿನಿಯ ಹೆಸರನ್ನು ತಿಳಿಸಬೇಕು. ಆದರೆ, ಕೆಲವು ವಿಧದ ಸಾಲಗಳಿಗೆ ನಾಮಿನಿಯ ಹೆಸರು ಅಗತ್ಯವಿಲ್ಲ.
ನಾಮಿನಿ: ಹಣಕಾಸಿನ ಅಗತ್ಯತೆಯ ತುರ್ತುಸ್ಥಿತಿಯಲ್ಲಿ ತಕ್ಷಣ ನೆನಪಾಗೋದು ಗೋಲ್ಡ್ ಲೋನ್. ಚಿನ್ನ ಅಡವಿಟ್ಟು ತೆಗೆದುಕೊಳ್ಳುವ ಸಾಲಗಳಿಗೆ ನಾಮಿನಿ ಅಗತ್ಯವಿದೆ. ಅನೇಕರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ತೆಗೆದುಕೊಳ್ಳುವಾಗ ನಾಮಿನಿಯನ್ನು ಹೆಸರಿಸದೇ ಸಮಸ್ಯೆಗಳಾಗಿವೆ. ಹಾಗಾಗಿ ಸಾಲಗಾರರು ಇಂತಹ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ನಾಮಿನಿಯ ಹೆಸರನ್ನು ಸಾಮಾನ್ಯವಾಗಿ ಬ್ಯಾಂಕ್ ಖಾತೆ, ಡಿಮ್ಯಾಟ್, ವಿಮೆ, ಫಿಕ್ಸ್ಡ್ ಡೆಪಾಸಿಟ್ ಸೇರಿ ಇತರ ಕೆಲ ಹೂಡಿಕೆಗಳಿಗೆ ಬಳಸಲಾಗುತ್ತದೆ. ಆದಾಗ್ಯೂ ಕೆಲವು ವಿಧದ ಸಾಲಗಳಿಗೆ ನಾಮಿನಿಯ ಹೆಸರು ಅಗತ್ಯವಿಲ್ಲ. ಆದರೆ, ಸಾಲಗಾರನಿಗೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದರೆ ನಾಮಿನಿಗಳು ಮುಂದೆ ಬಂದು ಸಾಲಗಾರರು ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳುವ ಅವಕಾಶ ಇರುತ್ತದೆ. ನಾಮಿನಿ ಹೆಸರಿಲ್ಲದಿದ್ದರೆ ಆ ಚಿನ್ನ ಬಿಡಿಸಿಕೊಳ್ಳುವಲ್ಲಿ ಸಮಸ್ಯೆ ಆಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಲಗಾರನ ಕುಟುಂಬ ಸದಸ್ಯರಿಗೆ ಚಿನ್ನವನ್ನು ಎಲ್ಲಿ ಅಡವಿಡಲಾಗಿದೆ ಎಂಬ ಮಾಹಿತಿಯೇ ಇರುವುದಿಲ್ಲ.
ಸಾಲಗಾರನು ಒಂದು ವರ್ಷದೊಳಗೆ ಸಾಲವನ್ನು ಮರುಪಾವತಿಸಬೇಕಾಗುತ್ತದೆ ಮತ್ತು ಅವರು ಸಾಲ ಪಡೆದಿರುವ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಗೆ ಮಾಸಿಕ ಬಡ್ಡಿ ಪಾವತಿಸಬೇಕು. ನಿರ್ದಿಷ್ಟ ಅವಧಿಯ ನಂತರ ಬಡ್ಡಿ ಮತ್ತು ಅಸಲು ಮೊತ್ತವನ್ನು ಪಾವತಿಸುವಲ್ಲಿ ವಿಫಲರಾದರೆ ಚಿನ್ನದ ಸಾಲಗಳನ್ನು ಅನುತ್ಪಾದಕ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ.
ವಾರಸುದಾರರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ನೋಟಿಸ್‌ಗೆ ತಲೆಕೆಡಿಸಿಕೊಳ್ಳದಿದ್ದರೆ, ಕಂಪನಿಗಳು ಚಿನ್ನವನ್ನು ಹರಾಜು ಮಾಡುತ್ತವೆ. ಒಂದು ವೇಳೆ ಕುಟುಂಬದ ಸದಸ್ಯರು ಸಾಲದ ಬಗ್ಗೆ ತಿಳಿದುಕೊಂಡು ಬ್ಯಾಂಕ್ ಸಂಪರ್ಕಿಸಿ ಸಂಪೂರ್ಣ ಸಾಲವನ್ನು ಮರುಪಾವತಿಸಿದರೂ ಕಾನೂನುಬದ್ಧವಾದ ಪ್ರಮಾಣಪತ್ರಗಳ ಅಗತ್ಯವಿದೆ.
ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗೆ ಈ ಆಹಾರ ಪದಾರ್ಥಗಳು ರಾಮಬಾಣ..!
ಚಿನ್ನದ ಸಾಲ ಪಡೆಯುವವರಿಗೆ ನಾಮಿನಿಗಳ ಹಸರು ಸೇರಿಸುವುದನ್ನು ಬ್ಯಾಂಕ್‌ಗಳು ಕಡ್ಡಾಯಗೊಳಿಸಿವೆ. ಆದರೆ, ಕೆಲವು ಬ್ಯಾಂಕ್ ಅಲ್ಲದ ಹಣಕಾಸಿನ ಸಂಸ್ಥೆಗಳು ಆ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ವರದಿಯಾಗಿದೆ. ಆದರೆ ನಾಮಿನಿ ಅತ್ಯಗತ್ಯ. ಸಾಲವನ್ನು ತೆಗೆದುಕೊಳ್ಳುವಾಗ ನೀವು ಈಗಾಗಲೇ ನಾಮಿನಿಯ ಹೆಸರನ್ನು ನಮೂದಿಸಿದ್ದೀರಾ ಎಂದು ನೋಡಿ. ಇಲ್ಲದಿದ್ದರೆ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಆ ವಿವರಗಳನ್ನು ನಮೂದಿಸಿ. ಹೊಸದಾಗಿ ಸಾಲ ಪಡೆಯುವವರು ನಾಮಿನಿಯ ಹೆಸರನ್ನು ಸೇರಿಸಲು ಮರೆಯದಿರಿ.