ಹೊಸದೆಹಲಿ: ಖಾಸಗೀಕರಣವನ್ನು ಮತ್ತೊಮ್ಮೆ ಆರಂಭಿಸಲು ಮತ್ತು ಅದೇ ಸಮಯದಲ್ಲಿ ಸರ್ಕಾರದ ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಐದು ಸರ್ಕಾರಿ ಕಂಪನಿಗಳ ಬಂಡವಾಳ ಹಿಂತೆಗೆತಕ್ಕೆ ಅನುಮತಿ ನೀಡಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್), ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ, ತೆಹ್ರಿ ಹೈಡ್ರೋ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಟಿಎಚ್‌ಡಿಸಿಐಎಲ್) ಮತ್ತು ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ (ಎನ್‌ಇಇಪಿಸಿಒ) ಕಂಪನಿಗಳಲ್ಲಿ ಬಂಡವಾಳ ಹಿಂಪಡೆತಕ್ಕೆ ಸಂಪುಟ ಸಮಿತಿ ಅನುಮತಿ ಸೂಚಿಸಿದೆ.

ಬಂಡವಾಳ ಹೂಡಿಕೆ ಹಿಂಪಡೆತ ಪ್ರಕ್ರಿಯೆಯಲ್ಲಿ ಮಾಲೀಕತ್ವ ಬದಲಾವಣೆ ಮತ್ತು ಆಡಳಿತ ಮಂಡಳಿ ನಿಯಂತ್ರಣದ ವರ್ಗಾವಣೆ ಒಳಗೊಂಡಿರುತ್ತದೆ. ಆದರೆ, ಎಲ್ಲ ಐದೂ ಕಂಪನಿಗಳ ಬಂಡವಾಳ ಹೂಡಿಕೆ ಹಿಂಪಡೆತಕ್ಕೆ ಅನುಮೋದನೆ ನೀಡಿಲ್ಲ. ಟಿಎಚ್‌ಡಿಸಿಐಎಲ್ ಮತ್ತು ಎನ್‌ಇಇಪಿಸಿಒ ಕಂಪನಿಗಳಲ್ಲಿ ಸರ್ಕಾರದ ಹೂಡಿಕೆಯನ್ನು ಎನ್‌ಟಿಪಿಸಿ ಖರೀದಿಸಲಿದೆ.
ಎನ್‌ಟಿಪಿಸಿ ಕೂಡ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕಂಪನಿಯಾಗಿದ್ದು, ಇವೆರಡೂ ಕಂಪನಿಗಳು ಸಾರ್ವಜನಿಕ ಕಂಪನಿಗಳಾಗಿಯೇ ಮುಂದುವರಿಯಲಿವೆ.
ಆದರೆ, ಇತರ ಕಂಪನಿಗಳ ಮಾಲೀಕತ್ವವು ಬಿಡ್ಡಿಂಗ್ ಪ್ರಕ್ರಿಯೆಯ ಫಲಿತಾಂಶವನ್ನು ಆಧರಿಸಿ ಖಾಸಗಿಯವರ ಪಾಲಾಗಬಹುದು. ಬಿಪಿಸಿಎಲ್‌ನಲ್ಲಿ ಸರ್ಕಾರ ಹೊಂದಿರುವ ಒಟ್ಟು ಶೇ. 53.3 ಪಾಲನ್ನು ಮಾರಾಟ ಮಾಡಲಿದೆ ಮತ್ತು ಹೊಸ ಮಾಲೀಕರಿಗೆ ಆಡಳಿತದ ನಿಯಂತ್ರಣವನ್ನು ವರ್ಗಾವಣೆ ಮಾಡಲಿದೆ. ಒಟ್ಟಾರೆಯಾಗಿ ಬಿಪಿಸಿಎಲ್ ಖಾಸಗೀಕರಣಕ್ಕೆ ಅನುಮತಿ ನೀಡಲಾಗಿದೆ.
ಸದ್ಯ ಇನ್ನೊಂದು ಸಾರ್ವಜನಿಕ ವಲಯದ ಘಟಕವಾದ ನುಮಾಲಿಗಢ ರಿಫೈನರಿ ಲಿಮಿಟೆಡ್ (ಎನ್‌ಆರ್‌ಎಲ್) ನಲ್ಲಿ ಬಿಪಿಸಿಎಲ್ ಶೇ. 61.65 ರಷ್ಟು ಈಕ್ವಿಟಿ ಪಾಲುದಾರಿಕೆ ಹೊಂದಿದೆ. ಆದರೆ, ಪ್ರಸ್ತಾವಿತ ಖಾಸಗೀಕರಣ ಯೋಜನೆಯಲ್ಲಿ ಎನ್‌ಆರ್‌ಎಲ್ ಒಳಗೊಂಡಿರುವುದಿಲ್ಲ. ಎನ್‌ಆರ್‌ಎಲ್‌ನಲ್ಲಿ ಬಿಪಿಸಿಎಲ್ ಹೊಂದಿರುವ ಷೇರು ಮತ್ತು ಆಡಳಿತ ಮಂಡಳಿ ನಿಯಂತ್ರಣವು ತೈಲ ಮತ್ತು ನೈಸರ್ಗಿಕ ಅನಿಲ ವಲಯದ ಇತರ ಸರ್ಕಾರಿ ಸ್ವಾಮ್ಯದ ಕಂಪನಿಗೆ ವರ್ಗಾವಣೆಯಾಗಲಿದೆ.
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಎಲ್ಲ ಶೇ.63.7 ಹೂಡಿಕೆಯನ್ನು ಮಾರಾಟ ಮಾಡಲು ಸಿಸಿಇಎ ಸಮ್ಮತಿಸಿದೆ. ಸರ್ಕಾರವು ಸದ್ಯ ಶೇ. 54.8 ಷೇರುಗಳನ್ನು ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾದಲ್ಲಿ ಹೊಂದಿದ್ದು, ಈ ಪೈಕಿ ಶೇ. 30.8 ರಷ್ಟನ್ನು ಮಾರಾಟ ಮಾಡಲು ಸಿಸಿಇಎ ಅನುಮತಿಸಿದೆ.
ಬಿಪಿಸಿಎಲ್, ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಕಂಟೇನರ್ ಕಾರ್ಪೊರೇಶನ್ ಇಂಡಿಯಾ ಲಿಸ್ಟೆಡ್ ಕಂಪನಿಗಳಾಗಿವೆ. ಬುಧವಾರ (2019 ನವೆಂಬರ್ 20)ರಂದು ಮಾರುಕಟ್ಟೆ ಮುಕ್ತಾಯವಾಗುವ ವೇಳೆಗೆ, ಬಂಡವಾಳ ಹಿಂಪಡೆತಕ್ಕೆ ಸರ್ಕಾರ ಅನುಮೋದನೆ ನೀಡಿರುವ ಷೇರು ಮೌಲ್ಯವು ಅನುಕ್ರಮವಾಗಿ ರೂ. 62,892 ಕೋಟಿ ರೂ., 2,019 ಕೋಟಿ ರೂ. ಮತ್ತು 5,772 ಕೋಟಿ ರೂ. ಆಗಿದೆ.
ಬುಧವಾರದ ಷೇರು ಬೆಲೆಯ ಪ್ರಕಾರ ಸಂಚಿತ ಮೊತ್ತ ಅಂದಾಜು 70,866 ಕೋಟಿ ರೂ. ಆಗಿದೆ. ಹಣಕಾಸು ಸಚಿವಾಲಯದ ಡೇಟಾ ಪ್ರಕಾರ, ಪ್ರಸ್ತತು ಹಣಕಾಸು ವರ್ಷದಲ್ಲಿ ಈವರೆಗೆ, ಬಂಡವಾಳ ಹಿಂಪಡೆತದಿಂದ ಒಟ್ಟು 17,364 ಕೋಟಿ ರೂ. ಅನ್ನು ಗಳಿಸಿದೆ. ಟಿಎಚ್‌ಡಿಸಿಐಎಲ್ ಮತ್ತು ಎನ್‌ಇಇಪಿಸಿಒ ಲಿಸ್ಟೆಡ್ ಕಂಪನಿಗಳಲ್ಲ. ಆದರೆ ಇವುಗಳನ್ನು ಎನ್‌ಟಿಪಿಸಿಗೆ ಮಾರಾಟ ಮಾಡುವ ಮೂಲಕ ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರವು ಬಂಡವಾಳ ಹಿಂಪಡೆತದಿಂದ ಒಟ್ಟು 1,05,000 ಕೋಟಿ ರೂ. ಗಳಿಸಬಹುದಾಗಿದೆ.
ಆದರೆ, ಖಾಸಗಿ ವಲಯವು ಈ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮಾಲೀಕತ್ವ ಮತ್ತು ಆಡಳಿತ ಮಂಡಳಿಯ ನಿಯಂತ್ರಣವನ್ನು ಪಡೆದುಕೊಳ್ಳಲು ಆಸಕ್ತಿ ವಹಿಸುತ್ತವೆ ಎಂಬುದನ್ನು ಗಮನಿಸಬೇಕಿದೆ.
ಒಟ್ಟಾರೆ ಆರ್ಥಿಕ ದ್ರವ್ಯತೆ ಮತ್ತು ಪ್ರಸ್ತುತ ಆರ್ಥಿಕ ಹಿಂಜರಿಕೆಯನ್ನು ಗಮನಿಸಿದರೆ, ಖಾಸಗಿ ವಲಯವು ತನ್ನದೇ ಸಂಪನ್ಮೂಲಗಳನ್ನು ಬಳಸುತ್ತದೆಯೇ ಅಥವಾ ಹೆಚ್ಚುವರಿ ಸಂಪನ್ಮೂಲಗಳನ್ನು ಬಳಸುತ್ತದೆಯೇ ಎಂಬುದನ್ನು ಗಮನಿಸಬೇಕಿದೆ. ಅಥವಾ ಈ ಕಂಪನಿಗಳು ಬ್ಯಾಂಕ್‌ಗಳು, ಕಾರ್ಪೊರೇಟ್ ಬಾಂಡ್‌ಗಲು ಅಥವಾ ಬಾಹ್ಯ ವಾಣಿಜ್ಯಿಕ ಸಾಲ (ಇಸಿಬಿ) ಪಡೆಯುತ್ತದೆಯೇ ಎಂಬುದನ್ನು ನೋಡಬೇಕಿದೆ.
ಒಂದು ವೇಳೆ ಖಾಸಗಿ ವಲಯವು ಅಷ್ಟೇನೂ ಆಸಕ್ತಿ ತೋರದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸುವುದರ ಬದಲಿಗೆ ಬೇರೆ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಹೂಡಿಕೆ ಹಿಂಪಡೆಯಲು ಸರ್ಕಾರವು ಷೇರು ಮಾರುಕಟ್ಟೆಯಿಂದ ತನ್ನ ಹೂಡಿಕೆಯನ್ನು ಹಿಂಪಡೆಯುವ ಸಾಧ್ಯತೆಯಿದೆ.
ಆಯ್ದ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರ್ಕಾರದ ಪಾಲನ್ನು ಶೇ. 51 ಕ್ಕಿಂತ ಕಡಿಮೆಗೆ ಇಳಿಸಲು ಮತ್ತು ಆಡಳಿತ ಮಂಡಳಿಯ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಿಸಿಇಎ ತಾತ್ವಿಕ ಒಪ್ಪಿಗೆಯನ್ನು ನೀಡಿದೆ.
ಇದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ದೇಶೀ ರಿಟೇಲ್ ಹೂಡಿಕೆದಾರರಿಂದ ಬಂಡವಾಳವನ್ನು ಹೆಚ್ಚಿಸಲು ಸರ್ಕಾರಕ್ಕೆ ಅನುವು ಮಾಡಲಿದೆ. ಇದರ ಪರಿಣಾಮವಾಗಿ, ಬಿಪಿಸಿಎಲ್, ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಕಂಟೇನರ್ ಕಾರ್ಪೊರೇಶನ್ ಆಫ್ ಇಂಡಿಯಾ ಪ್ರಕರಣಗಳಲ್ಲಿ ಸರ್ಕಾರವು ಖಾಸಗಿ ವಲಯದಲ್ಲಿ ಆಸಕ್ತಿಯನ್ನು ಪರೀಕ್ಷಿಸಲಿದೆ. ಇದೇ ವೇಳೆ, ಮಾಲೀಕತ್ವವನ್ನು ಕಡಿಮೆ ಮಾಡಿಕೊಳ್ಳುತ್ತಲೇ ಆಡಳಿತ ಮಂಡಳಿ ನಿಯಂತ್ರಣವನ್ನೂ ಉಳಿಸಿಕೊಳ್ಳುವ ಪರ್ಯಾಯ ಯೋಜನೆಯೊಂದನ್ನೂ ಸರ್ಕಾರ ರೂಪಿಸಿದೆ.
ಪೂಜಾ ಮೆಹ್ರಾ ದೆಹಲಿ ಮೂಲದ ಪತ್ರಕರ್ತರಾಗಿದ್ದು ದಿ ಲೋಸ್ಟ್ ಡಿಕೇಡ್ (2008-18): ಹೌ ದಿ ಇಂಡಿಯಾ ಗ್ರೋತ್ ಸ್ಟೋರಿ ಡಿವಾಲ್ವಡ್ ಇನ್ಟು ಗ್ರೋತ್ ವಿತೌಟ್ ಎ ಸ್ಟೋರಿ ಕೃತಿಯನ್ನು ರಚಿಸಿದ್ದಾರೆ.