ಪುಣೆ: ದಿನದಿಂದ ದಿನಕ್ಕೆ ಈರುಳ್ಳಿ ಬೆಲೆಯು ಗಗನಮುಖಿಯಾಗಿ ಜನಸಾಮಾನ್ಯರನ್ನು ಹೈರಾಣು ಮಾಡುತ್ತಿದೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳು ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಕಳೆದ 50 ವರ್ಷಗಳಿಂದ ತೊಡಗಿಸಿಕೊಂಡಿರುವ ಶರದ್ ಪವಾರ್ ಅವರು ಇಂದು 79ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಹಿತೈಷಿಗಳು ಶುಭಕೋರಿದ್ದಾರೆ. ಇವರೆಲ್ಲರಿಗಿಂತ ಭಿನ್ನವಾಗಿ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಶರದ್ ಪವಾರ್ ಅವರ ಅಭಿಮಾನಿಗಳು ಹಾಗೂ ಎನ್‌ಸಿಪಿ ಕಾರ್ಯಕರ್ತರು 80 ಪೈಸೆಗೆ ಕೆ.ಜಿ. ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.
ಉತ್ಪಾದನೆಯ ಅಭಾವ ಹಾಗೂ ದಾಸ್ತಾನು ಕೊರತೆಯಿಂದ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಕೆ.ಜಿ ಈರುಳ್ಳಿಯು 200 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ. ಜನಸಾಮಾನ್ಯರಿಗೆ ದರ ಏರಿಕೆ ದೊಡ್ಡ ಹೊಡೆತ ನೀಡಿದೆ. ಇಂತಹ ವೇಳೆಯಲ್ಲಿ ಎನ್‌ಸಿಪಿ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಜನ್ಮ ದಿನದಂದು ಅಗ್ಗದ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಕಳೆದ ತಿಂಗಳಿಂದ ಹೆಚ್ಚಿನ ದರದಲ್ಲಿ ಖರೀದಿಸಿ ಹೈರಾಣಾಗಿದ್ದ ಇಲ್ಲಿನ ಸ್ಥಳೀಯರು ಸರತಿ ಸಾಲಿನಲ್ಲಿ ನಿಂತು ಈರುಳ್ಳಿ ಖರೀದಿಗೆ ಮುಗಿಬಿದಿದ್ದಾರೆ.