ಮುಂಬೈ: ದೇಶಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿ ಆಚರಿಸಲಾಗುತ್ತಿದ್ದು, ಇದೇ ದಿನ ಮುಂಬೈ ಷೇರುಪೇಟೆಯಲ್ಲಿ ವಿಶೇಷ ವಹಿವಾಟು 'ಮುಹೂರ್ತ ಟ್ರೇಡಿಂಗ್' ಸಕಾರಾತ್ಮಕವಾಗಿ ಆರಂಭಗೊಂಡಿದೆ.
ಆರ್ಥಿಕತೆಯಲ್ಲಿನ ದುರ್ಬಲವಾದ ಉಪಭೋಗದ ಬೇಡಿಕೆ, ಅಮೆರಿಕ- ಚೀನಾ ನಡುವಿನ ವ್ಯಾಪಾರ ವಾಣಿಜ್ಯ ಸಮರ, ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ವಿಗ್ನತೆ, 2019ರ ಬಜೆಟ್ಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ, ನೀರಸವಾದ ಸಾಂಸ್ಥಿಕ ಗಳಿಕೆ ಮತ್ತು ಭಾರತ ಹಾಗೂ ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದತಿಯಂತಹ ಅಂಶಗಳು 2075ರ ಸಂವತ್ಸರದ ಪ್ರಮುಖ ಅಂಶಗಳಾಗಿದ್ದವು. ಈ ಭಾವನೆಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆಯೂ 2076ರ ಸಂವತ್ಸರವು ಇಂದಿನಿಂದ ಸಕಾರಾತ್ಮಕವಾಗಿ ಆರಂಭಗೊಂಡಿದೆ.
ಇಂದು ಆರಂಭಗೊಂಡ ಮುಹೂರ್ತ ಟ್ರೇಡಿಂಗ್ನ ಪ್ರಿಓಪನಿಂಗ್ನಲ್ಲಿ ಸೆನ್ಸೆಕ್ಸ್ 200 ಅಂಶಗಳ ಏರಿಕೆ ದಾಖಲಿಸಿ ಶೇ. 0.8ರಷ್ಟು ಏರಿಕೆಯಾಗಿ 39,397 ಅಂಕಗಳ ಮಟ್ಟದಲ್ಲೂ ನಿಫ್ಟಿ ಶೇ. 0.6ರಷ್ಟು ಜಿಗಿತ ಕಂಡು 11,662 ಅಂಶಗಳ ಮಟ್ಟದಲ್ಲಿ ಧನಾತ್ಮಕವಾಗಿ ವಹಿವಾಟು ನಡೆಸುತ್ತಿದೆ.
ಷೇರು ಖರೀದಿದಾರರು ರಿಲಯನ್ಸ್ ಇಂಡಸ್ಟ್ರೀಸ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಲೋಮ್ಬರ್ಡ್, ಗೋದ್ರೆಜ್ ಇಂಡಸ್ಟ್ರೀಸ್, ಐಟಿಸಿ ಹಾಗೂ ಹೆಚ್ಯುಎಲ್ ಷೇರುಗಳತ್ತ ಒಲವು ವ್ಯಕ್ತಪಡಿಸಿದ್ದಾರೆ. ಮುಹೂರ್ತ ಟ್ರೇಡಿಂಗ್ ವೇಳೆ ಹೂಡಿಕೆದಾರರು ದೀರ್ಘ ಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಮುಂಬೈ ಷೇರು ಮಾರುಕಟ್ಟೆಯ ಬಿಎಸ್ಇ ಹಾಗೂ ಎನ್ಎಸ್ಇ ಸಂಜೆ 6.15ರಿಂದ 7.15ರವರೆಗೆ ವಿಶೇಷ ಟ್ರೇಡಿಂಗ್ಗಾಗಿ ತೆರೆದುಕೊಳ್ಳುತ್ತಿವೆ. ಹಿಂದೂ ಪಂಚಾಂಗ ಸಂವತ್ಸರ 2075 ಕೊನೆಗೊಂಡು ಇಂದಿನಿಂದ 2076 ಸಂವತ್ಸರ ಆರಂಭವಾಗಲಿದೆ.