ಮುಂಬೈ: ತೀವ್ರ ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಫಲಿತಾಂಶ ಸಿಕ್ಕಿದೆ. ಮತದಾನದ ಆಸುಪಾಸಿನ ದಿನಗಳಲ್ಲಿ ಯುಎಸ್ದಲ್ಲಿನ ಬೆಳವಣಿಗೆಗಳು ವಿಶ್ವದ ಷೇರುಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದವು. ಈ ಐದು ದಿನಗಳ ಅವಧಿಯಲ್ಲಿ ದೇಶೀಯ ಹೂಡಿಕೆದಾರರು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ.
ಕಳೆದ ಐದು ದಿನಗಳ ಷೇರು ವಹಿವಾಟಿನಲ್ಲಿ ಮುಂಬೈ ಷೇರು ಸೂಚ್ಯಂಕ ಏರುಗತಿಯಲ್ಲಿ ಸಾಗುತ್ತಾ ಬಂದಿದ್ದು, ಒಟ್ಟಾರೆ 2,279 ಅಂಕಗಳಷ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ಸಹ 627 ಅಂಕಗಳಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಹೂಡಿಕೆದಾರರ ಕೋಟ್ಯಂತರ ರೂಪಾಯಿಗಳನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ.
ವಾರಾಂತ್ಯದ ಶುಕ್ರವಾರದ ವಹಿವಾಟಿನಂದು ಸೆನ್ಸೆಕ್ಸ್ 552.90 ಅಂಕ ಏರಿಕೆಯಾಗಿ 41,893.06 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 143.25 ಅಂಕ ಹೆಚ್ಚಳವಾಗಿ 12,263.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್ ವಿಭಾಗದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ. 3ರಷ್ಟು ಏರಿಕೆ ಕಂಡಿದ್ದು, ಬಜಾಜ್ ಫಿನ್‌ಸರ್ವ್, ಇಂಡಸ್ಇಂಡ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಟ್ವಿನ್ಸ್ ಮತ್ತು ಕೊಟಕ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮಾರುತಿ, ಭಾರ್ತಿ ಏರ್‌ಟೆಲ್, ಏಷ್ಯಾನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ನೆಸ್ಲೆ ಇಂಡಿಯಾ ದಿನದ ಟಾಪ್ ಲೂಸರ್ಗಳಾದವು.
ಜಾಗತಿಕ ಮಾರುಕಟ್ಟೆಗಳು ಅಮೆರಿಕ ಚುನಾವಣೆಯ ಮುಕ್ತಾಯದ ಪ್ರತಿಫಲಕ್ಕೆ ಒಳಗಾದವು. ಕಡಿಮೆ ನಿರ್ಬಂಧಿತ ವ್ಯಾಪಾರ ನೀತಿಯೊಂದಿಗೆ ಡೆಮೋಕ್ರೆಟ್ ನೇತೃತ್ವದ ಸರ್ಕಾರ ರಚನೆಯು ಹಾನಿಕರವಲ್ಲದ ವಲಸೆ ನೀತಿಗಳ ಧನಾತ್ಮಕ ಮನೋಭಾವ ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳಿಗೆ ಪ್ರಚೋದಕವಾದವು.
ಈ ಜಾಗತಿಕ ಅಂಶಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಗಳನ್ನು ಕೋವಿಡ್ ಪೂರ್ವ ಮಟ್ಟಕ್ಕೆ ಪ್ರೇರೇಪಿಸಲಿವೆ ಎಂದು ಹೂಡಿಕೆ ತಜ್ಞರು ಅಂದಾಜಿಸಿದ್ದಾರೆ.