ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯೂ ನಿರೀಕ್ಷಿತ ಖರೀದಿದಾರರನ್ನು ತಲುಪಲು ಮಹೀಂದ್ರಾ ಅಂಡ್ ಮಹೀಂದ್ರಾ (ಎಂ&ಎಂ) ಆನ್ಲೈನ್ನಲ್ಲಿ ವಾಹನ ಮಾರಾಟ ಸೇವೆಯನ್ನು ಶುಕ್ರವಾರದಿಂದ ಆರಂಭಿಸಿದೆ.
'ಓನ್ ಆನ್‌ಲೈನ್' ಎಂಬ ಹೊಸ ಸೇವೆಯಡಿ ಗ್ರಾಹಕರು ತಮ್ಮ ವಾಹನಗಳಿಗೆ ಹಣಕಾಸು, ವಿಮೆ, ವಿನಿಮಯ, ಬಿಡಿಭಾಗಗಳು ಮತ್ತು ಮಾಲೀಕತ್ವದಂತಹ ಸೇವೆಗಳನ್ನು ಹೊಂದಬಹುದು ಎಂದು ಆಟೋಮೊಬೈಲ್ ಕಂಪನಿ ತಿಳಿಸಿದೆ.
ನಮ್ಮಲ್ಲಿ ಆನ್‌ಲೈನ್ ಖರೀದಿಯು ಈಗಾಗಲೇ ಜಾರಿಯಲ್ಲಿದೆ. ಆನ್‌ಲೈನ್ ಮೂಲಕ ಕಾರು ಖರೀದಿಯ ಅನುಭವವನ್ನು ಗ್ರಾಹಕರಿಗೆ ನೀಡುವುದು ನಮ್ಮ ಮುಂದಿನ ಹೆಜ್ಜೆಯಾಗಿದೆ ಎಂದು ಎಂ&ಎಂ ಆಟೋಮೋಟಿವ್ ವಿಭಾಗದ ಸಿಇಒ ವಿಜಯ್ ನಕ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಆದ್ಯತೆಯ ಖರೀದಿಯ ಮಾರ್ಗವಾಗಿದೆ. ಆನ್‌ಲೈನ್ ಮುಖೇನ ವಾಹನಗಳ ಖರೀದಿ ಗ್ರಾಹಕರ ಆಕರ್ಷಣೆ ಆಗಲಿದೆ. ನಮ್ಮ ಗ್ರಾಹಕರಿಗೆ ಆಟೋಮೋಟಿವ್ನ ಚಿಲ್ಲರೆ ವ್ಯಾಪಾರದಲ್ಲಿ ಹೊಸ ಬದಲಾವಣೆ ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಓನ್ ಆನ್‌ಲೈನ್ ಮೂಲಕ ಗ್ರಾಹಕರು ತಮ್ಮ ವಾಹನಗಳ ಖರೀದಿ, ತ್ವರಿತ ವಿನಿಮಯ, ಹಣಕಾಸು ಮತ್ತು ವಿಮೆ ಸಹ ಪಡೆಯಬಹುದು. ಬುಕ್ಕಿಂಗ್ ಪಾವತಿ, ಕಾರು ಮಾಲೀಕತ್ವದಂತಹ ಸೇವೆಗಳನ್ನೂ ಒದಗಿಸಲಾಗುತ್ತದೆ ಎಂದಿದ್ದಾರೆ.