ನವದೆಹಲಿ : ಕಪ್ಪು ಮೈಬಣ್ಣದವರ ವಿರುದ್ಧದ ಧೋರಣೆ ಉತ್ತೇಜಿಸಲಾಗುತ್ತಿದೆ ಎಂಬ ಬಹುದಿನಗಳಿಂದ ಟೀಕೆಗೆ ಗುರಿಯಾಗಿದ್ದ ಸೌಂದರ್ಯವರ್ಧಕ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿನ ಆಕ್ಷೇಪಾರ್ಹ ಪದಗಳನ್ನು ಕೈಬಿಡಲು ನಿರ್ಧರಿಸಿವೆ.
ಇತ್ತೀಚೆಗೆ ಭಾರತೀಯ ಘಟಕದ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆಯು ತನ್ನ ಫೇರ್ & ಲೌವ್ಲಿ ಉತ್ಪನ್ನದ 'ಫೇರ್' ಪದವನ್ನು ತೆಗೆದು ಹಾಕುವುದಾಗಿ ಘೋಷಿಸಿತ್ತು. ಫ್ರೆಂಚ್ ಮೂಲದ ಕಾಸ್ಮೆಟಿಕ್ ಕಂಪನಿಯಾದ ಲೋರಿಯಲ್ ಗ್ರೂಪ್ ಸಹ ತನ್ನ ಚರ್ಮ ಸೌಂದರ್ಯ ಉತ್ಪನ್ನಗಳಲ್ಲಿನ ವೈಟ್, ಫೇರ್, ಲೈಟ್ ಪದಗಳನ್ನು ಕೈಬಿಡಲಿದೆ.
ಲೋರಿಯಲ್ ಗ್ರೂಪ್ ಚರ್ಮದ ಉತ್ಪನ್ನಗಳನ್ನ ವಿವರಿಸಲು ಬಳಸುವ ಪದಗಳ ಬಗೆಗಿನ ನ್ಯಾಯಸಮ್ಮತ ಕಾಳಜಿಯನ್ನು ಕಂಪನಿಯು ಅಂಗೀಕರಿಸಿದೆ. ವೈಟ್/ವೈಟ್ನಿಂಗ್,ಫೇರ್/ಫೇರ್ನೆಸ್, ಲೈಟ್/ಲೈಟಿಂಗ್ನಂತಹ ಪದಗಳನ್ನು ಎಲ್ಲಾ ಚರ್ಮದ ಉತ್ಪನ್ನಗಳಿಂದ ತೆಗೆದು ಹಾಕಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಲೋರಿಯಲ್ ತ್ವಚೆ ಸೌಂದರ್ಯ ಆರೈಕೆ ವಿಭಾಗದಲ್ಲಿ ಅತಿದೊಡ್ಡ ಮಾರಾಟಗಾರನಾಗಿದೆ. ಗಾರ್ನಿಯರ್, ಲೋರಿಯಲ್ ಪ್ಯಾರಿಸ್, ಮೇಬೆಲ್‌ಲೈನ್ ನ್ಯೂಯಾರ್ಕ್ ಮತ್ತು ಎನ್‌ವೈಎಕ್ಸ್ ಪ್ರೊಫೆಷನಲ್ ಮೇಕ್‌ಅಪ್‌ನಂತಹ ಜಾಗತಿಕ ಬ್ರಾಂಡ್‌ಗಳನ್ನು ಹೊಂದಿದೆ.
ಪ್ರಪಂಚದಾದ್ಯಂತ ನಡೆಯುತ್ತಿರುವ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪ್ರತಿಭಟನೆಯ ಬಳಿಕ ಹಲವು ಕಂಪನಿಗಳು ತಮ್ಮ ಉತ್ಪನ್ನ ಮತ್ತು ಬ್ರ್ಯಾಂಡಿಂಗ್‌ನ ಮರು ಮೌಲ್ಯಮಾಪನ ಮಾಡಲು ಮುಂದಾಗಿವೆ. ಇತ್ತೀಚೆಗೆ ಅಮೆರಿಕ ಮೂಲದ ಹೆಲ್ತ್‌ಕೇರ್ ಮತ್ತು ಎಫ್‌ಎಂಸಿಜಿ ದೈತ್ಯ ಜಾನ್ಸನ್ ಅಂಡ್ ಜಾನ್ಸನ್ (ಜೆ&ಜೆ) ಭಾರತ ಸೇರಿ ಜಾಗತಿಕವಾಗಿ ತನ್ನ ಸೌಂದರ್ಯ ವರ್ಧಕ ಕ್ರೀಮ್‌ಗಳ ಮಾರಾಟ ನಿಲ್ಲಿಸಿತು.