ಹೈದರಾಬಾದ್: ಜೀವ ವಿಮಾ ದೈತ್ಯ ಭಾರತೀಯ ಜೀವ ವಿಮಾ ನಿಗಮ - ಎಲ್ಐಸಿ ಆರಂಭಿಕ ಸಾರ್ವಜನಿಕ ಹೂಡಿಕೆಗೆ ಮುಂದಾಗಿದೆ. ತನ್ನ ಪಾಲಿಸಿದಾರರಿಗೆ ಪ್ರತ್ಯೇಕವಾಗಿ ಷೇರುಗಳನ್ನು ವಿತರಿಸಲಿದ್ದು, ಇವರಿಗೆ ಶೇ.10ರಷ್ಟು ಷೇರುಗಳನ್ನು ಹಂಚಿಕೆ ಮಾಡುತ್ತಿದೆ.
ಇದರ ಜೊತೆಗೆ ತನ್ನ ಪಾಲಿಸಿದಾರರಿಗೆ ಷೇರಿನ ಬೆಲೆಯಲ್ಲಿ ಶೇ.5-10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಇನ್ನೂ ಪಾಲಿಸಿಗಳಿಗೆ ಪ್ರೀಮಿಯಂ ಪಾವತಿಸುತ್ತಿರುವ ಪಾಲಿಸಿದಾರರನ್ನು ಎಲ್‌ಐಸಿಯಲ್ಲಿ ಷೇರುದಾರರನ್ನಾಗಿ ಮಾಡಲು ಮತ್ತು ರಿಯಾಯಿತಿಯಲ್ಲಿ ಷೇರುಗಳನ್ನು ಪಡೆಯಲು ಏನು ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ನೀವು ಎಲ್‌ಐಸಿ ಪಾಲಿಸಿದಾರರಾಗಿದ್ದರೆ ಮತ್ತು ಐಪಿಒನಲ್ಲಿ ಭಾಗವಹಿಸಲು ಬಯಸಿದರೆ, ನೀವು ನಿಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಎಲ್‌ಐಸಿ ಪಾಲಿಸಿಗೆ ಲಗತ್ತಿಸಬೇಕು. ಪಾಲಿಸಿಗೆ ಆಧಾರ್ ಅನ್ನು ಸೇರಿಸುವುದರಿಂದ ಆನ್‌ಲೈನ್ ವಹಿವಾಟು ಮಾಡುವುದು ಸುಲಭವಾಗುತ್ತದೆ. ಸಾಮಾನ್ಯವಾಗಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಪ್ಯಾನ್ ಕಾರ್ಡ್ ಕಡ್ಡಾಯವಲ್ಲ. ಆದರೆ ಎಲ್ಐಸಿ ತನ್ನ ಪಾಲಿಸಿದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲು ಇದನ್ನು ಮಾನದಂಡವಾಗಿ ತೆಗೆದುಕೊಳ್ಳುತ್ತಿರುವುದರಿಂದ ಇದೀಗ ಪ್ಯಾನ್ ಅನ್ನು ನೋಂದಾಯಿಸುವ ಅಗತ್ಯವಿದೆ.
ಮೊದಲು LIC ಅಧಿಕೃತ ವೆಬ್‌ಸೈಟ್ https://licindia.in/ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ಆನ್‌ಲೈನ್ ಪ್ಯಾನ್ ನೋಂದಣಿ ಎಂಬ ಲಿಂಕ್ ಇದೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಮತ್ತು ಒಟಿಪಿ ಮೂಲಕ ಕೇಳಲಾದ ವಿವರಗಳನ್ನು ನಮೂದಿಸಿ. ಇದಕ್ಕೂ ಮೊದಲು, ಎಲ್‌ಐಸಿ ವೆಬ್‌ಸೈಟ್‌ನಲ್ಲಿ ನಿಮ್ಮ ಪಾಲಿಸಿ ಸಂಖ್ಯೆಯನ್ನು ಆಧರಿಸಿ ಆನ್‌ಲೈನ್ ಬಳಕೆದಾರ ಖಾತೆಯನ್ನು ರಚಿಸಿ. ಇದು ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
ಐಪಿಒನಲ್ಲಿ ಷೇರುಗಳಿಗೆ ಅರ್ಜಿ ಸಲ್ಲಿಸಲು ಡಿಮ್ಯಾಟ್ ಖಾತೆಯ ಅಗತ್ಯವಿದೆ. ಅದೇ ರೀತಿ, ಪ್ಯಾನ್, ಆಧಾರ್, ಬ್ಯಾಂಕ್ ಖಾತೆ ವಿವರಗಳು ಸಹ ಅಗತ್ಯವಿದೆ. ಡಿಮ್ಯಾಟ್ ಖಾತೆಯನ್ನು ತೆಗೆದುಕೊಳ್ಳುವುದು ಸುಲಭ. ನೀವು ಡಿಮ್ಯಾಟ್ ಖಾತೆಯನ್ನು ಹೊಂದಿಲ್ಲದಿದ್ದರೆ ಕೊನೆಯ ನಿಮಿಷದವರೆಗೂ ಕಾಯದೆ ನಿಮ್ಮ ಸ್ಟಾಕ್ ಬ್ರೋಕರ್ ಮೂಲಕ ಸಾಧ್ಯವಾದಷ್ಟು ಬೇಗ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು.
2 ವರ್ಷಗಳ ಹಿಂದೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 7.63 ಲಕ್ಷ ಕೋಟಿ: ಭಾರತದ ವಿಮಾ ಮಾರುಕಟ್ಟೆಯ ಮೌಲ್ಯ 2019-20ರಲ್ಲಿ ಸುಮಾರು 7.63 ಲಕ್ಷ ಕೋಟಿ ಆಗಿತ್ತು. ವಿಮಾ ವಲಯದಲ್ಲಿನ ಶೇ.67.39ರಷ್ಟು ಮಾರುಕಟ್ಟೆ ಎಲ್ಐಸಿ ಹಿಡಿತದಲ್ಲಿದೆ. ಇನ್ನುಳಿದ ಶೇ. 32.61ರಷ್ಟು ಪಾಲು 23 ಖಾಸಗಿ ವಿಮಾ ಕಂಪನಿಗಳ ಬಳಿ ಇದೆ. ಕಂಪನಿಯ ಗಾತ್ರದ ಕಾರಣದಿಂದಾಗಿ ಎಲ್ಐಸಿ ಐಪಿಒ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಎಲ್ಐಸಿಯ ರಿಟರ್ನ್ ಆನ್ ಈಕ್ವಿಟಿ (ಹೂಡಿಕೆ ಮೇಲಿನ ಗಳಿಕೆ) ಶೇ. 82ರಷ್ಟಿದೆ ಎಂದು ಕ್ರಿಸಿಲ್ ಸಂಸ್ಥೆಯ ವರದಿ ಹೇಳಿದೆ.
ಇದನ್ನೂ ಓದಿ: ಐಪಿಒ ಮೂಲಕ ಶೇ 5ರಷ್ಟು ಷೇರು ಮಾರಾಟಕ್ಕೆ ಸೆಬಿಗೆ ಎಲ್‌ಐಸಿ ಅರ್ಜಿ