ನವದೆಹಲಿ : ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯು ಆರ್ಥಿಕ ಚಟುವಟಿಕೆಗಳನ್ನು ನಿಶ್ಚಲತೆಗೆ ನೂಕಿ ವಾಹನಗಳ ಓಡಾಟವನ್ನೇ ಸ್ಥಗಿತಗೊಳಿಸಿದ್ದರ ಫಲವಾಗಿ ಮಾರ್ಚ್‌ನಲ್ಲಿ ದೇಶಿ ಇಂಧನ ಬಳಕೆ ಶೇ.18ರಷ್ಟು ಕುಗ್ಗಿದೆ.
ಇದು ಕಳೆದ ಒಂದು ದಶಕದ ಅವಧಿಯಲ್ಲಿನ ಅತಿದೊಡ್ಡ ಅನುಭೋಗದ ಕುಸಿತ ಇದಾಗಿದೆ. ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಮಾರ್ಚ್ ವೇಳೆಯಲ್ಲಿ ಡೀಸೆಲ್, ಪೆಟ್ರೋಲ್ ಮತ್ತು ವೈಮಾನಿಕ ಶೇ.17.79ರಷ್ಟು ಇಳಿದು 16.08 ಮಿಲಿಯನ್ ಟನ್‌ಗೆ ತಲುಪಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿದೆ. ಟ್ರಕ್, ಕಾರು ಮತ್ತು ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಸಾವಿರಾರು ರೈಲುಗಳು ಹಳಿಗಳ ಮೇಲೆ ಓಡಾಡುತ್ತಿಲ್ಲ. ಇದರಿಂದಾಗಿ ದೇಶದಲ್ಲಿ ಹೆಚ್ಚು ಬಳಕೆಯಾಗುವ ಡೀಸೆಲ್ ಬೇಡಿಕೆ ಶೇ.24.23ರಷ್ಟು ತಗ್ಗಿ 5.65 ದಶಲಕ್ಷ ಟನ್‌ಗೆ ತಲುಪಿದೆ. ಪೆಟ್ರೋಲ್ ಮಾರಾಟ ಸಹ ಶೇ.16.37ರಷ್ಟು ಇಳಿದು 2.15 ದಶಲಕ್ಷ ಟನ್‌ಗಳಿಗೆ ಬಂದು ನಿಂತಿದೆ.
ಮಾರಾಟ ಪ್ರಮಾಣ ಕುಗ್ಗುತ್ತಿರುವುದರಿಂದ ತೈಲ ಕಂಪನಿಗಳು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿವೆ. ಇಂಡಿಯನ್ ಆಯಿಲ್, ಬಿಪಿಸಿಎಲ್, ಹೆಚ್‌ಪಿಸಿಎಲ್ ಸೇರಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2020ರ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದ ಗಳಿಕೆಯಲ್ಲಿ ಗಮನಾರ್ಹ ಸವೆತ ಕಂಡು ಬಂದಿದೆ.