ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೊಲ್ಲಿ ಯುದ್ಧ ಮೊದಲುಗೊಂಡು ಎರಡು ಮೂರು ದಶಕ ಕಳೆದಿವೆ. ಈಗ ಮೊತ್ತೊಂದು ಸುತ್ತಿನ ತೈಲ ಸಮರ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ಆರಂಭವಾಗಿದೆ.
ಸೋಮವಾರದಂದು ರಷ್ಯಾ ವಿರುದ್ಧ ಸೌದಿ ತೈಲ ದರ ಇಳಿಕೆಯ ಯುದ್ಧ ಘೋಷಿಸಿದ್ದು, ಕಚ್ಚಾ ತೈಲದಲ್ಲಿ ಶೇ 30ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ ಕಚ್ಚಾ ತೈಲವು 30 ಡಾಲರ್ಗೆ ತಲುಪಿದೆ.
ವಿಶ್ವದ ಅತ್ಯಧಿಕ ಕಚ್ಚಾತೈಲ ಉತ್ಪಾದಕ ಹಾಗೂ ಮಾರಾಟ ರಾಷ್ಟ್ರ ಸೌದಿ ಅರೇಬಿಯಾ ಹಾಗೂ ವಿಶ್ವದ ಎರಡನೇ ಬೃಹತ್ ಕಚ್ಚಾತೈಲ ಉತ್ಪಾದಕ ರಾಷ್ಟ್ರ ರಷ್ಯಾ ಕಚ್ಚಾತೈಲ ಬೆಲೆಯ ಪೈಪೋಟಿ ಶುರು ಮಾಡಿಕೊಂಡಿವೆ. ನಾಟಕೀಯ ಬೆಳವಣಿಗೆಯೊಂದರಲ್ಲಿ ಸೌದಿ ಏಕಾಏಕಿ ಕಚ್ಚಾತೈಲ ದರದಲ್ಲಿ ಭಾರೀ ಇಳಿಕೆ ಮಾಡಿದೆ. ಗಲ್ಫ್ ಯುದ್ಧದ ನಂತರ ಕಚ್ಚಾ ತೈಲದ ದರದಲ್ಲಿ ಇಷ್ಟೊಂದು ಕ್ಷೀಣಿಸಿದ್ದು ಇದೇ ಮೊದಲು.
ಪ್ರಸ್ತುತ ಒಪೆಕ್ ರಾಷ್ಟ್ರಗಳ ಒಪ್ಪಂದ ಇದೇ ಏಪ್ರಿಲ್ ಮಾಸಿಕದಲ್ಲಿ ಮುಕ್ತಾಯಗೊಳ್ಳಲಿದ್ದು, ರಷ್ಯಾಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿರುವ ಸೌದಿ ದಿನಕ್ಕೆ 10 ಮಿಲಿಯನ್ ಬ್ಯಾರೆಲ್ ಕಚ್ಚಾತೈಲದ ಉತ್ಪಾದನೆಗೆ ಮುಂದಾಗಿದೆ.
ಕೊರೊನಾ ವೈರಸ್ನಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ಕಚ್ಚಾತೈಲ ಬೆಲೆ ಇಳಿಕೆಯಿಂದ ಸರಿದೂಗಿಸಬಹುದು ಎಂದು ಸೌದಿ ಅಂದಾಜಿಸಿದೆ. ಇದಕ್ಕೆ ಒಪೆಕ್ ರಾಷ್ಟ್ರಗಳು ಸಹ ಸಹಮತ ವ್ಯಕ್ತಪಡಿಸಿವೆ. ಒಪೆಕ್ ರಾಷ್ಟ್ರಗಳ ಉತ್ಪಾದನಾ ಕಡಿತದ ಪ್ರಸ್ತಾವಕ್ಕೆ ರಷ್ಯಾ ಅಡ್ಡಿ ಉಂಟು ಮಾಡಿದೆ. ಇದರಿಂದ ಸಿಟ್ಟಿಗೆದ್ದ ಸೌದಿ ಅರೇಬಿಯಾ ರಷ್ಯಾದೊಂದಿಗೆ ವಾಣಿಜ್ಯ ಸಮರ ಆರಂಭಿಸಿದ್ದು, ಜಾಗತಿಕ ಕಚ್ಚಾ ತೈಲ ಬೆಲೆ ಕುಸಿತ ಕಂಡಿದೆ.
ಕಚ್ಚಾ ತೈಲದಲ್ಲಿ ಶೇ 22ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ 32 ಡಾಲರ್ಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲ, ಜಾಗತಿಕ ಮಾರುಕಟ್ಟೆಯಲ್ಲಿ ಸಹ ಶೇ 22ರಷ್ಟು ಕುಸಿದು ಬ್ಯಾರೆಲ್ ವೊಂದಕ್ಕೆ 35 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕ ತೈಲ ಶೇ 27ರಷ್ಟು ಕ್ಷೀಣಿಸಿ 30 ಡಾಲರ್ಗೆ ತಲಿಪಿದ್ದು, ನಾಲ್ಕು ವರ್ಷಗಳಲ್ಲಿ ಕನಿಷ್ಠ ದರವಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ಭಾರತವು ತೈಲಕ್ಕಾಗಿ ಶೇ 83ರಷ್ಟು ವಿದೇಶಿ ಮೂಲಗಳನ್ನು ಅವಲಂಭಿಸಿದೆ. 2020ನೇ ವರ್ಷದಲ್ಲಿ ತೈಲ ದರ ದೀರ್ಘಾವಧಿಯವರೆಗೆ ಕುಸಿತವಾದರೇ ಭಾರತಕ್ಕೆ ವಾರ್ಷಿಕವಾಗಿ 30-40 ಬಿಲಿಯನ್ ಡಾಲರ್ನಷ್ಟು ಉಳಿತಾಯ ಆಗಲಿದೆ ಎಂದು ತಜ್ಞರ ಅಂದಾಜಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿದ ಕೋಟ್ಯಾಕ್ ಮಹೀಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟ್ಯಾಕ್, 'ವೈಸರ್ ಹಾಗೂ ತೈಲ ಸಮರದಿಂದ ಸಿಹಿ ಸುದ್ದಿ ಸಿಕ್ಕಂತಾಗಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 45 ಡಾಲರ್ ಬಂದು ನಿಂತಿದೆ. ಇತ್ತೀಚಿನ 20 ಡಾಲರ್ ಕುಸಿತವು ಭಾರತ ವಾರ್ಷಿಕವಾಗಿ 30 ಬಿಲಿಯನ್ ಡಾಲರ್ ಉಳಿಸಲಿದೆ. ಜಾಗತಿಕ ಬಡ್ಡಿದರ ಸಹ ಇಳಿಕೆಯಾಗಿ ಹಲವು ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಇದು ಬೆಳೆವಣಿಗೆಯ ವೇಗವನ್ನು ಹೆಚ್ಚಿಸಲಿದೆ' ಎಂದು ಬರೆದುಕೊಂಡಿದ್ದಾರೆ.