ನವದೆಹಲಿ: ಏಪ್ರಿಲ್‌ನಲ್ಲಿ ದೇಶಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಸುಮಾರು 15.40 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ (ಹೆಚ್‌ಸಿಕ್ಯು) ಮಾತ್ರೆ ಸರಬರಾಜು ಮಾಡಲು ಸರ್ಕಾರ ಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶಿಯ ಬಳಕೆಗಾಗಿ ಔಷಧದ ವಿತರಣೆ ಶೇಖರಣೆ ಖಚಿತಪಡಿಸಿದ ನಂತರ 62 ದೇಶಗಳಿಗೆ ಹೆಚ್‌ಸಿಕ್ಯು ಔಷಧಿ ರಫ್ತು ಮಾಡಲು ಸರ್ಕಾರ ಮುಂದಾಗಿದೆ.
ದೇಶದಲ್ಲಿ ಸಾಮಾನ್ಯ ಪರಿಸ್ಥಿತಿಯಲ್ಲಿ ಮಾಸಿಕ ಸುಮಾರು 2ರಿಂದ 2.5 ಕೋಟಿ ಹೆಚ್‌ಸಿಕ್ಯು ಮಾತ್ರೆಗಳ ಅವಶ್ಯಕತೆ ಇರುತ್ತದೆ. ಆದರೂ 2020ರ ಏಪ್ರಿಲ್ ತಿಂಗಳಲ್ಲಿ ನಾವು ಚಿಲ್ಲರೆ ಔಷಧಾಲಯ/ವರ್ತಕರಿಗೆ ಸುಮಾರು 7.5 ಕೋಟಿ ಮಾತ್ರೆಗಳನ್ನು ಪೂರೈಸಲು ಯೋಜಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ತಿಂಗಳು 1.5 ಕೋಟಿ ಮಾತ್ರೆಗಳ ಅಗತ್ಯದ ಬದಲಿಗೆ ಕೇಂದ್ರಕ್ಕೆ 6.75 ಕೋಟಿ ಮಾತ್ರೆಗಳನ್ನು ನೀಡಲಾಗುವುದು. ವಿವಿಧ ರಾಜ್ಯ ಸರ್ಕಾರಗಳಿಗೆ 80 ಲಕ್ಷ ಮಾತ್ರೆಗಳು, ಇಎಸ್ಐಎಸ್ ಮತ್ತು ಬಿಪಿಪಿಐನಂತಹ ವಿವಿಧ ಸರ್ಕಾರಿ ಸಂಸ್ಥೆಗಳಿಗೆ 45 ಲಕ್ಷ ಮಾತ್ರೆಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
2020ರ ಏಪ್ರಿಲ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ (ಸುಮಾರು) 15.40 ಕೋಟಿ ಹೆಚ್‌ಸಿಕ್ಯು ಮಾತ್ರೆಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.