ಮುಂಬೈ: ಮುಂಗಡ ಪತ್ರದಲ್ಲಿ ಘೋಷಣೆಯಾದ ಅನಿರೀಕ್ಷಿತ ಆಮದು ಚಿನ್ನದ ಮೇಲಿನ ಸುಂಕ ಏರಿಕೆ ಹಿನ್ನೆಲೆಯಲ್ಲಿ ದೇಶಿಯ ಚಿನಿವಾರ ಪೇಟೆಯಲ್ಲಿ ಕಳೆದ 3 ವರ್ಷದಲ್ಲೇ ಪ್ರಥಮ ಬಾರಿಗೆ ಎಂಬಂತೆ ಒತ್ತಾಯ ಪೂರ್ವಕ ರಿಯಾಯಿತಿ ಘೋಷಣೆಯಾಗಿದೆ.
ವಿಶ್ವದಲ್ಲಿ ಚೀನಾ ಬಳಿಕ ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ಭಾರತ, 2016ರ ವೇಳೆ ದೇಶಿ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಮೇಲೆ 30 ಡಾಲರ್ನಷ್ಟು ರಿಯಾಯಿತಿ ನೀಡಿತ್ತು. ಇದ್ದಾದ ಬಳಿಕ ಕಳೆದ ವಾರದಿಂದ ಪ್ರತಿ ಔನ್ಸ್ ಮೇಲೆ 25 ಡಾಲರ್ ರಿಯಾಯಿತಿ ದೊರೆಯುತ್ತಿದೆ.
ಬಜೆಟ್‌ನಲ್ಲಿ ಆಮದು ಮಾಡಿಕೊಳ್ಳಲಾದ ಚಿನ್ನದ ಮೇಲೆ ಈ ಹಿಂದಿನ ಶೇ 10ರಷ್ಟು ಸುಂಕದ ಬದಲಿಗೆ ಶೇ 12.5ಕ್ಕೆ ಏರಿಸಲಾಗಿದೆ. ಇದು ಚಿಲ್ಲರೆ ಬೇಡಿಕೆಯನ್ನು ಕುಂಠಿತಗೊಳಿಸಬಹುದು ಮತ್ತು ಕಳ್ಳಸಾಗಣೆಯನ್ನು ಹೆಚ್ಚಿಸಬಹುದು ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಕಾಏಕಿ ಚಿನ್ನದ ಮೇಲೆ ಸುಂಕ ಹೆಚ್ಚಿಸಿರುವುದು ಆಶ್ಚರ್ಯವಾಗಿದೆ. ಚಿನ್ನಾಭರಣ ದರ ಹೆಚ್ಚಳವಾಗಿದ್ದು, ಖರೀದಿ ಮೇಲೆ 30 ಡಾಲರ್ನಷ್ಟು ರಿಯಾಯಿತಿ ನೀಡುತ್ತಿದ್ದರೂ ಕೊಳ್ಳುವವರು ಮುಂದೆ ಬರುತ್ತಿಲ್ಲ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಜೆಟ್‌ನಲ್ಲಿ ಸುಂಕ ಏರಿಕೆ ಘೋಷಣೆ ಆದ ಮರುದಿನವೇ 10 ಗ್ರಾಂ. ಚಿನ್ನ ₹ 35,100 ತಲುಪಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಕಳೆದ 6 ತಿಂಗಳಲ್ಲಿ ಶೇ 11ರಷ್ಟು ದರ ಏರಿಕೆಯಾಗಿದೆ. ಪ್ರತಿಯೊಬ್ಬ ವರ್ತಕರು ಈಗ ಗೊಂದಲದಲ್ಲಿದ್ದಾರೆ. ಈ ಹಿಂದಿನ ಖರೀದಿಯ ಚಿನ್ನದ ಮೇಲೆ ರಿಯಾಯಿತಿ ಘೋಷಿಸಿದ್ದರೂ ಗ್ರಾಹಕರು ಅಂಗಡಿಯತ್ತ ಮುಖ ಮಾಡುತ್ತಿಲ್ಲ ಎಂಬುದು ವರ್ತಕರ ಅಂಬೋಣ.
ಇಂದು ಬೆಂಗಳೂರಲ್ಲಿ 24 ಕ್ಯಾರೆಟ್ನ 10 ಗ್ರಾಂ. ಚಿನ್ನದ ಮೇಲೆ ₹ 260 ಏರಿಕೆಯಾಗಿದ್ದು, ₹ 35,180ಯಲ್ಲಿ ಮಾರಾಟ ಆಗುತ್ತಿದೆ. ಅದೇ ರೀತಿ 24 ಕ್ಯಾರೆಟ್ ₹ 250 ಜಿಗಿತದಿಂದ ₹ 32,250ರಲ್ಲಿ ವಹಿವಾಟು ನಡೆಸುತ್ತಿದೆ.