ಪಣಜಿ: ಗೋವಾ ಸರ್ಕಾರವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಏಜೆನ್ಸಿಯಿಂದ 1,045 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸುತ್ತಿದ್ದು, ಪಡಿತರ ಚೀಟಿ ಹೊಂದಿರುವ 3.5 ಲಕ್ಷ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಪೂರೈಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿನ ಬಳಕೆಯ ಅಗತ್ಯ ಸರಕುಗಳ ಬೆಲೆ ಗಣನೀಯವಾಗಿ ಹೆಚ್ಚಾದ ನಂತರ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ನೀಡುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಗೋವಾ ಸರ್ಕಾರವು 1,045 ಮೆಟ್ರಿಕ್ ಟನ್ ಈರುಳ್ಳಿಯನ್ನು ನಾಸಿಕ್ ಮೂಲದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದಿಂದ (ನಾಫೆಡ್) ತರಿಸಿಕೊಳ್ಳಲಿದೆ. ಎಲ್ಲ ಪಡಿತರ ಚೀಟಿ ಹೊಂದಿರುವವರಿಗೆ ವಿತರಣೆ ಮಾಡಲಾಗುವುದು ಎಂದು ರಾಜ್ಯ ನಾಗರಿಕ ಸರಬರಾಜು ಇಲಾಖೆಯ ನಿರ್ದೇಶಕ ಸಿದ್ಧವಿನಾಯಕ್ ನಾಯಕ್ ಹೇಳಿದ್ದಾರೆ.
ಒಟ್ಟು 3.5 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಎಲ್ಲ ನ್ಯಾಯಯುತ ಬೆಲೆ ಅಂಗಡಿಗಳಲ್ಲಿ ವಿಶೇಷ ಡ್ರೈವ್ ಮೂಲಕ ತಲಾ 3 ಕೆ.ಜಿ. ಈರುಳ್ಳಿಯನ್ನು ಕೆ.ಜಿ.ಗೆ 32 ರೂ.ನಂತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.