ಮುಂಬೈ: ಜಾಗತಿಕ ಹೂಡಿಕೆ ಸಂಸ್ಥೆ ಜನರಲ್ ಅಟ್ಲಾಂಟಿಕ್, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್)ನಲ್ಲಿ 3,675 ಕೋಟಿ ರೂ. ಹೂಡಿಕೆ ಮಾಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಈ ಬಗ್ಗೆ ಘೋಷಣೆ ಮಾಡಿದ್ದು, ಆರ್ಆರ್ವಿಎಲ್ ಪ್ರೀ-ಮನಿ ಈಕ್ವಿಟಿ ಮೌಲ್ಯ 4.285 ಲಕ್ಷ ಕೋಟಿ ರೂ.ಯಷ್ಟಿದೆ.
ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ ಶೇ 0.84ರಷ್ಟು ಪಾಲು ದೊರೆತಂತಾಗುತ್ತದೆ (ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ). ವರ್ಷದ ಆರಂಭದಲ್ಲಿ ಜನರಲ್ ಅಟ್ಲಾಂಟಿಕ್ನಿಂದ ಜಿಯೋ ಪ್ಲಾಟ್ ಫಾರ್ಮ್ನಲ್ಲಿ 6,598.38 ಕೋಟಿ ರೂ. ಹೂಡಿಕೆ ಮಾಡಲಾಯಿತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಜನರಲ್ ಅಟ್ಲಾಂಟಿಕ್ ಜತೆಗೆ ಬಾಂಧವ್ಯ ವಿಸ್ತರಣೆ ಆಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ವರ್ತಕರು ಹಾಗೂ ಗ್ರಾಹಕರ ಸಬಲೀಕರಣಕ್ಕೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಅಂತಿಮವಾಗಿ ಭಾರತದ ರೀಟೇಲ್ ವಲಯದ ಬದಲಾವಣೆಗೆ ಪ್ರಯತ್ನಿಸುತ್ತೇವೆ. ಗ್ರಾಹಕ ವ್ಯವಹಾರದಲ್ಲಿ ಜನರಲ್ ಅಟ್ಲಾಂಟಿಕ್ ಅನುಭವ ಅಪಾರವಾಗಿದೆ. ಕಳೆದ ಇಪ್ಪತ್ತು ವರ್ಷದಿಂದ ಹೂಡಿಕೆ ಮಾಡಿದ ಅನುಭವ ಇದೆ. ದೇಶದ ರೀಟೇಲ್ ವಲಯದಲ್ಲಿ ನಾವು ಹೊಸ ಅಲೆ ಸೃಷ್ಟಿಸುತ್ತೇವೆ ಎಂದಿದ್ದಾರೆ.
ಜನರಲ್ ಅಟ್ಲಾಂಟಿಕ್ ಸಿಇಒ ಬಿಲ್ ಫೋರ್ಡ್ ಮಾತನಾಡಿ, ಮುಕೇಶ್ ಅವರ ಹೊಸ ವಾಣಿಜ್ಯ ಗುರಿಯನ್ನು ಬೆಂಬಲಿಸುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಜಿಯೋ ಪ್ಲಾಟ್ ಫಾರ್ಮ್ ಜತೆಗೆ ರೀಟೇಲ್ ವ್ಯವಹಾರವು ಡಿಜಿಟಲ್ ಇಂಡಿಯಾ ಸಾಕಾರದತ್ತ ಸಾಗುತ್ತದೆ. ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಗೆ ಇರುವ ನಂಬಿಕೆಯು ಜನರಲ್ ಅಟ್ಲಾಂಟಿಕ್ಗೂ ಇದೆ. ರಿಲಯನ್ಸ್ಗೆ ಇರುವ ಅಪಾರ ಸಾಮರ್ಥ್ಯ ಕೂಡ ನಮಗೆ ಸಂತೋಷ ತಂದಿದೆ. ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಅರ್ಥಪೂರ್ಣವಾಗಿ ರಿಲಯನ್ಸ್ ತಂಡ ಮುನ್ನಡೆಸುತ್ತಿದೆ ಎಂದಿದ್ದಾರೆ.