ನ್ಯೂಯಾರ್ಕ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ದೋಷಾರೋಪಣೆ ಸಲ್ಲಿಸುವ ಪ್ರಕ್ರಿಯೆಯಿಂದ ಅವರನ್ನು ಕೈಬಿಟ್ಟ ನಂತರ ಟ್ರಂಪ್ ಅವರು ಈ ತಿಂಗಳ ಮೂರನೇ ವಾರದಲ್ಲಿ ಪ್ರಪ್ರಥಮ ಬಾರಿಗೆ ಭಾರತ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳಸಿಕೊಂಡಿದ್ದ ಅಮೆರಿಕ - ಭಾರತ ದ್ವಿಪಕ್ಷೀಯ ಸಂಬಂಧಗಳು ಮತ್ತೆ ಸುಗಮವಾಗಿ ನಡೆಯಬಹುದು ಎಂಬ ಆಶಾಭಾವನೆಯನ್ನು ಇದು ಹುಟ್ಟಿಸಿದೆ.
ಜಾಗತಿಕ ರಾಜಕಾರಣದಲ್ಲಿ ಭಾರತದ ಸಕ್ರಿಯ ಪಾತ್ರವನ್ನು ಬಲವಾಗಿ ಸಮರ್ಥಿಸುವ ಟ್ರಂಪ್ ಸರ್ಕಾರವು ಉಭಯ ದೇಶಗಳ ನಡುವಿನ ವ್ಯಾಪಾರದ ವಿಷಯಕ್ಕೆ ಬಂದಾಗ ಮಾತ್ರ ‘ಅಮೆರಿಕವೇ ಮೊದಲು’ ಎಂಬ ನೀತಿಗೆ ಆತುಕೊಂಡು ನಮ್ಮ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದಕ್ಕೆ ತಕ್ಕಂತೆ ಭಾರತವೂ ಪ್ರತಿಕ್ರಿಯಿಸಿದಾಗ ಎರಡೂ ದೇಶಗಳ ವ್ಯಾಪಾರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಲೂ ಅಂತಹುದೇ ಆತಂಕ ಎದುರಾಗಿದೆ. ಒಂದು ವೇಳೆ ಟ್ರಂಪ್ ಆಡಳಿತವು ಕೇಳುತ್ತಿರುವ ವ್ಯಾಪಾರಿ ವಿನಾಯತಿಗಳನ್ನು ಭಾರತವೆಲ್ಲಾದರೂ ನೀಡಿದ್ದೇ ಆದಲ್ಲಿ ನಮ್ಮ ದೇಶದ ಕೃಷಿ ಮತ್ತು ಹೈನುಗಾರಿಕೆ ಉದ್ಯಮಗಳ ಸೊಂಟವೇ ಮುರಿದು ತೀವ್ರ ಸಂಕಷ್ಟ ಎದುರಾಗಲಿದೆ.
ವಾಷಿಂಗ್ಟನ್ ನ ಬಯಕೆಯಂತೆ ಅಮೆರಿಕದ ಉತ್ಪನ್ನಗಳ ಮೇಲೆ ಸುಂಕ ಮತ್ತು ಸುಂಕೇತರ ತಡೆಗಳನ್ನು ತೆಗೆದು ಹಾಕಿದರೆ, ನಮ್ಮ ಸ್ಥಳೀಯ ಮಾರುಕಟ್ಟೆಯನ್ನು ಅಮೆರಿಕದ ಕಾರ್ನ್, ಹತ್ತಿ, ಸೋಯಾ, ಗೋಧಿ ಮತ್ತು ಡ್ರೈಫ್ರೂಟ್ ಉತ್ಪನ್ನಗಳಿಗೆ ಮುಕ್ತಗೊಳಿಸಿದರೆ ಅದು ನಮ್ಮ ಪಾಲಿಗೆ ಅತ್ಯಂತ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ರೈತ ಸಂಘಟನೆಗಳು ಈಗಾಗಲೇ ಆತಂಕ ವ್ಯಕ್ತಪಡಿಸುತ್ತಿವೆ.
ಒಂದೋ, ಎರಡೋ ಹಸುಗಳನ್ನನಾಗಲೀ ಎಮ್ಮೆಗಳನ್ನಾಗಲೀ ಸಾಕಿಕೊಂಡು ಹೈನುಗಾರಿಕೆ ಮಾಡಿ ಬದುಕುವ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಸಣ್ಣ ರೈತರು ಭಾರತದಲ್ಲಿದ್ದಾರೆ. ಇಂತಹ ದೇಶದಲ್ಲಿ ಅಮೆರಿಕದ ದೈತ್ಯ ಕಂಪನಿಗಳ ಹೈನುಗಾರಿಕೆ ಉತ್ಪನ್ನಗಳನ್ನು ಒಳಬಿಟ್ಟುಕೊಂಡು ಪೈಪೋಟಿ ಎದುರಿಸಲು ಸಾಧ್ಯವೇ ಎಂಬುದು ಮುಖ್ಯ ಪ್ರಶ್ನೆ. ಮೇಲಾಗಿ ಅಮೆರಿಕದ ಹೈನುಗಾರಿಕೆ ಉತ್ಪನ್ನಗಳಿಗೆ ಅಲ್ಲಿನ ಸರ್ಕಾರವು ಯಥೇಚ್ಛವಾಗಿ ಸಬ್ಸಿಡಿ ನೀಡುತ್ತದೆ. ಇದೇ ರೀತಿಯಲ್ಲಿ ಅಮೆರಿಕದಿಂದ ಹತ್ತಿಯನ್ನ ಆಮದು ಮಾಡಿಕೊಳ್ಳಲು ತೊಡಗಿದರೆ ನಮ್ಮ ಹತ್ತಿ ಬೆಳೆಯುವ ರೈತರ ಬದುಕುಗಳು ಅತಂತ್ರಗೊಳ್ಳುತ್ತವಲ್ಲದೇ ಅಲ್ಲಿನ ಕುಲಾಂತರಿ ಬೆಳೆಗಳ ಉತ್ಪನ್ನಗಳನ್ನು ನಾವು ಆಮದು ಮಾಡಿಕೊಂಡರೆ ಇಲ್ಲಿನ ಜೀವ ಭದ್ರತೆಯೂ ಸಂಕಷ್ಟಕ್ಕೀಡಾಗಲಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗೀದಾರಿಕೆ (RCEP) ವೇದಿಕೆಯಲ್ಲಿ ನಿಂತು ಭಾರತವು ಭಾರತೀಯ ಹಿತದೃಷ್ಟಿಯ ದೃಷ್ಟಿಕೋನದ ಪರವಾಗಿ ಧ್ವನಿ ಎತ್ತಿತಲ್ಲದೇ ಭಾರತದ ರೈತರ ಹಿತಾಸಕ್ತಿಯನ್ನು ರಕ್ಷಿಸಿತು. ಅದೇ ರೀತಿಯಲ್ಲಿ ಅಮೆರಿಕದೊಂದಿಗೆ ವ್ಯವಹರಿಸುವಾಗಲೂ ನಾವು ಭಯ-ಒಲವುಗಳಿಂದ ಮುಕ್ತರಾಗಿ ವ್ಯವಹರಿಸಬೇಕೆಂದು ಎಲ್ಲರ ಬಯಕೆಯಾಗಿದೆ. ‘ವ್ಯಾಪಾರ ಯುದ್ಧಗಳು ನಡೆಯುವುದು ಒಳ್ಳೆಯದು ಮತ್ತು ಅವುಗಳನ್ನು ಸುಲಭವಾಗಿ ಗೆಲ್ಲಬಹುದು’ ಎಂದು ಪ್ರತಿಪಾದಿಸಿದ ಟ್ರಂಪ್ ತಮ್ಮ ವ್ಯಾಪಾರ ಕೊರತೆಯನ್ನು ತಗ್ಗಿಸಲು ಬಯಸಿದ್ದಲ್ಲದೇ ಭಾರತ ಹಾಗೂ ಚೀನಾಗಳಿಂದ ಬರುವ ಆಮದು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದ್ದರು.
ಇದಕ್ಕೆ ಸರಿಯಾಗಿ ಭಾರತ ಮತ್ತು ಚೀನಾಗಳೂ ಅಮೆರಿಕದ ಆಮದುಗಳ ಮೇಲೆ ತೆರಿಗೆ ವಿಧಿಸಿದಾಗ ಅಮೆರಿಕದ ಕೃಷಿಕರು ಹುಯಿಲಿಟ್ಟರು. ಈ ರೀತಿಯಲ್ಲಿ ಉಂಟಾದ ಬಿಕ್ಕಟ್ಟನ್ನು ತಾತ್ಕಾಲಿಕ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಪರಿಹರಿಸಲು ಟ್ರಂಪ್ ಈಗ ಪ್ರಯತ್ನ ನಡೆಸುತ್ತಿದ್ದಾರೆ., ‘ಅನೇಕ ವರ್ಷಗಳಿಂದಲೂ ಭಾರತವು ಅಮೆರಿಕದ ವಸ್ತುಗಳ ಮೇಲೆ ಭಾರವಾದ ಸುಂಕವನ್ನು ಹೇರುತ್ತಿದೆ, ಅದು ಸುಂಕಗಳ ರಾಜನಾಗಿದೆ’ ಎಂದು ಟ್ರಂಪ್ ಸರ್ಕಾರವು ದೂರುತ್ತಿದೆ. ಆದರೆ, ‘ಭಾರತವು ‘ವ್ಯಾಪಾರ ಗಾತ್ರ ಸರಾಸರಿಯ ಮೇಲೆ ವಿಧಿಸುತ್ತಿರುವ ಸುಂಕ ಹೆಚ್ಚೇನಿಲ್ಲ’ ಎಂದು ಮೋದಿ ಸರ್ಕಾರ ವಾದಿಸುತ್ತಿದೆ.
ಭಾರತದ ವ್ಯಾಪಾರಿ ನಿರ್ಬಂಧಗಳಿಂದಾಗಿ ಅಮೆರಿಕದ ರಫ್ತು ಪ್ರಮಾಣ ಕಡಿಮೆಯಾಗಿದೆ ಎಂದು ಹೈನುಗಾರಿಕೆ ಮತ್ತು ವೈದ್ಯಕೀಯ ಉದ್ಯಮಗಳು ದೂರು ನೀಡಿರುವುದರ ಆಧಾರದಲ್ಲಿ ಅಮೆರಿಕವು ಭಾರತವನ್ನು GSP (ಆದ್ಯತೆಯ ಮೇಲಿನ ಸಾಮಾನ್ಯೀಕರಿಸಿದ ಏರ್ಪಾಡು) ಪಟ್ಟಿಯಿಂದ ಕಳೆದ ಜುಲೈ ತಿಂಗಳಿನಲ್ಲಿ ತೆಗೆದು ಹಾಕಿದೆ. ಭಾರತವು GSP ಪಟ್ಟಿಯಲ್ಲಿ ತನ್ನ ಹೆಸರನ್ನು ಮತ್ತೆ ಸೇರಿಸಲು ಒತ್ತಾಯ ಮಾಡುತ್ತಿರುವ ಸಂದರ್ಭದಲ್ಲೇ ಅಮೆರಿಕವು ಬಿಲಿಯನ್ ಡಾಲರ್ (71 ಸಾವಿರ ಕೋಟಿ) ವ್ಯಾಪಾರ ಒಪ್ಪಂದವನ್ನು ಈಗಾಗಲೇ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ಮಾಡಿಕೊಂಡಿದೆ ಎಂಬ ಸುದ್ದಿ ಬಂದಿದೆ. ಭಾರತವು ಮಾವು, ದ್ರಾಕ್ಷಿ ಮತ್ತು ದಾಳಿಂಬೆಗಳ ಮೇಲಿನ ಆಮದು ನಿಯಂತ್ರಣವನ್ನು ಸರಳಗೊಳಿಸುವಂತೆ ಕೇಳುತ್ತಿದ್ದರೆ ಅಮೆರಿಕವು 600 ಬಿಲಿಯನ್ ಡಾಲರುಗಳ ಕೃಷಿ ಉತ್ಪನ್ನಗಳ ರಫ್ತಿಗೆ ರಹದಾರಿ ಮಾಡಿಕೊಡಲು ಅವಕಾಶ ಕೇಳುತ್ತಿದೆ.
2015ರಲ್ಲಿ ವಾಣಿಜ್ಯ ಸಚಿವಾಲಯವು ನೀಡಿರುವ ಎಚ್ಚರಿಕೆಯ ಪ್ರಕಾರ ಅಮೆರಿಕದ ಬಯಕೆಯಂತೆ ಪೌಲ್ಟ್ರಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳನ್ನು ತಗ್ಗಿಸಿದ ಪಕ್ಷದಲ್ಲಿ ಭಾರತದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಬೆಲೆ ತೀರಾ ಕುಸಿದು ಸ್ಥಳೀಯ ಕೋಳಿ ಸಾಕಣಿಕೆಯ ಮೇಲೆ ಶೇಕಡಾ 40ರಷ್ಟು ನಷ್ಟವಾಗುತ್ತದೆ. ಈ ಅಸಮಾನ ಪೈಪೋಟಿಯು ಭಾರತಕ್ಕೆ ತೀವ್ರ ಪೆಟ್ಟು ನೀಡುವುದು ನಿಶ್ಚಿತ. ಅಮೆರಿಕದೊಂದಿಗೆ ಭಾರತದ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣ ಕೇವಲ ಶೇಕಡಾ 3ರಷ್ಟು ಮಾತ್ರವಿದೆ. ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣವು 240 ಶತಕೋಟಿ ಡಾಲರುಗಳಿಷ್ಟಿದ್ದರೆ ಆಮದು ಪ್ರಮಾಣವು 3550 ಶತಕೋಟಿ ಡಾಲರುಗಳಷ್ಟಿದೆ. ವ್ಯಾಪಾರ ಕೊರತೆಯು 1690 ಶತಕೋಟಿ ಡಾಲರಿನಷ್ಟು ಕುಸಿದರೂ ಟ್ರಂಪ್ ಸರ್ಕಾರವು ಭಾರತದ ಮಾರುಕಟ್ಟೆಯನ್ನು ಕಸಿದುಕೊಂಡು ದೊಡ್ಡ ಮಟ್ಟದ ಲಾಭ ಸೂರೆಗಯ್ಯುವ ಅಮೆರಿಕದ ಬಯಕೆಯಲ್ಲಿ ಭಾರತದ ರೈತಾಪಿಯ ಮೇಲಾಗುವ ಪರಿಣಾಮದ ಕುರಿತು ಕಾಳಜಿಯಿಲ್ಲ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ (OECD) ಪ್ರಕಾರ ನಮ್ಮ ಸರ್ಕಾರವು 2016ನೇ ಇಸವಿ ಒಂದರಲ್ಲೇ ಸರ್ಕಾರಗಳ ಬೆಂಬಲ ಬೆಲೆಯ ಆಟದಲ್ಲಿ ಸುಮಾರು 2 ಲಕ್ಷ 65 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ.
ಅದೇ ವರ್ಷ ಚೀನಾವು ತನ್ನ ರೈತರಿಗೆ 2,200 ಶತಕೋಟಿ ಡಾಲರುಗಳಷ್ಟನ್ನು ನೀಡಿದ್ದರೆ 36 ದೇಶಗಳ ಸಂಘಟನೆಯಾದ OECDಯು 1,200 ಶತಕೋಟಿ ಡಾಲರ್ಗಳನ್ನ ನೀಡಿದೆ! ಭಾರತದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡು ಒದ್ದಾಡುತ್ತಿರುವ ಈ ಹೊತ್ತಿನಲ್ಲೇ ಅಮೆರಿಕದ ಆಮದುಗಳಿಗೂ ಪ್ರವೇಶ ಒದಗಿಸಿದರೆ ಭಾರತದ ರೈತನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎನ್ನುವ ಸ್ಥಿತಿಯಾಗುತ್ತದೆ. ಪೌಲ್ಟ್ರಿ ಉತ್ಪನ್ನಗಳ ಮೇಲಿನ ಆಮದು ಸುಂಕವು ಈಗ ಶೇಕಡಾ 100ರಷ್ಟಿದೆ. ಅದನ್ನು ಅಮೆರಿಕದ ಬಯಕೆಯಂತೆ ಶೇಕಡಾ 30ಕ್ಕೆ ಇಳಿಸಿದರೆ ಅಥವಾ ಅಮೆರಿಕದ ಹೈನುಗಾರಿಕೆಯ ಉತ್ಪನ್ನಗಳ ಮೇಲೆ ಅನಗತ್ಯ ಒಲವು ತೋರಿದ್ದೇ ಆದರೆ ಅದು ನಮ್ಮ ಕೃಷಿ ಆಧಾರಿತ ಉದ್ಯಮಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಇಡೀ ದೇಶದ ಜನರಿಗೆ ಅನ್ನ ನೀಡುತ್ತಾ ತಮ್ಮ ಕಠಿಣ ಶ್ರಮದಿಂದ ಈ ದೇಶವನ್ನು ನಡೆಸುತ್ತಿರುವ ರೈತಾಪಿಗಳ ಹಿತವನ್ನು ಕಾಪಾಡುವ ವಿಷಯದಲ್ಲಿ ರಾಜಿಯಿಲ್ಲದೇ ನಡೆದುಕೊಳ್ಳುವುದು ಮೋದಿ ಸರ್ಕಾರದ ಕರ್ತವ್ಯವಾಗಿದೆ.