ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಹೇಳಿದೆ.
ಅಂತರ್ ರಾಜ್ಯ ಪ್ರಯಾಣ, ವಾಯು ಮತ್ತು ರೈಲು ಸೇವೆಗಳನ್ನು ಸ್ಥಗಿತ ಸೇರಿದಂತೆ 'ಸೀಮಿತ' ಲಾಕ್‌ಡೌನ್ ಮೇ 4ರಿಂದ ಇನ್ನೂ ಎರಡು ವಾರಗಳವರೆಗೆ ಜಾರಿಯಲ್ಲಿರುತ್ತದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವರ್ಗಿಕರಿಸಿ ಸೀಮಿತ ವಿನಾಯತಿಗಳನ್ನು ನೀಡುವುದಾಗಿ ಗೃಹಸಚಿವಾಲಯ ಶುಕ್ರವಾರ ಘೋಷಿಸಿತ್ತು.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು ಸೇರಿದಂತೆ ಕೆಲವು ಸೇವೆಗಳನ್ನು ಮುಂದುವರಿಸಲು ಗೃಹ ಸಚಿವಾಲಯದ ಮಾರ್ಗಸೂಚಿಗಳು ಅನುಮತಿ ನೀಡುತ್ತವೆ ಎಂದಿದೆ.
ಸ್ಟಾಕ್ ಎಕ್ಸೆಂಜ್, ಕ್ಲಿಯರಿಂಗ್ ಕಾರ್ಪೊರೇಷನ್ಸ್, ಡಿಪಾಸಿಟರಿಗಳು, ಕಸ್ಟಡಿಯನ್ಸ್, ಮ್ಯೂಚುವಲ್ ಫಂಡ್ಗಳು, ಆಸ್ತಿ ನಿರ್ವಹಣಾ ಕಂಪನಿಗಳು, ಸ್ಟಾಕ್ ಬ್ರೋಕರ್, ವ್ಯಾಪಾರ ಸದಸ್ಯರು, ಕ್ಲಿಯರಿಂಗ್ ಸದಸ್ಯರು, ಠೇವಣಿಗಳ ಪಾಲುದಾರರು, ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆಯ ಏಜೆಂಟರು, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು, ಡಿಬೆಂಚರ್ ಟ್ರಸ್ಟಿಗಳು, ವಿದೇಶಿ ಬಂಡವಾಳ ಹೂಡಿಕೆದಾರರು, ಪೋರ್ಟ್ಫೊಲಿಯೋ ವ್ಯವಸ್ಥಾಪಕರು, ಪರ್ಯಾಯ ಹೂಡಿಕೆ ನಿಧಿಗಳು ಮತ್ತು ಹೂಡಿಕೆ ಸಲಹೆಗಾರರಿಗೆ ವಿನಾಯತಿ ಅಡಿ ಬರುತ್ತವೆ.