ಗುವಾಹಟಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅಗಲಿಕೆಗೆ ರಾಷ್ಟ್ರದ ಉದ್ಯಮ ವಲಯದ ದಿಗ್ಗಜರು ಕಂಬನಿ ಮಿಡಿಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕಾಫಿ ಉದ್ಯಮದ ಭವಿಷ್ಯದ ದಿನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕಾಫಿ ಉದ್ಯಮ ವಲಯದ ವಿಷಮ ಪರಿಸ್ಥಿತಿಯಲ್ಲಿ ಅಸ್ಸೋಂನ ಗುವಾಹಟಿಯಲ್ಲಿ ಕೆಜಿ ಟೀ ಪುಡಿ ದಾಖಲೆ ಬೆಲೆಗೆ ಹರಾಜಾಗಿದೆ.
ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ (ಜಿಟಿಎಸಿ) ದಿಬ್ರುಗರ್ನ ಮೈಜಾನ್ ಟೀ ಎಸ್ಟೇಟ್‌ನ ವಿಶೇಷ ಸಾಂಪ್ರದಾಯಿಕ 1 ಕೆಜಿ ಟೀ ಪುಡಿ 70,501 ರೂ.ಗೆ ಹರಾಜಾಗಿದೆ. 24 ಗಂಟೆಗಳ ಹಿಂದೆಯಷ್ಟೇ ಮನೋಹರ್ ಗೋಲ್ಡ್ ಟೀ ಎಸ್ಟೇಟ್‌ನ ಕೆಜಿ ಟೀ ಪುಡಿ ಬ್ಯಾಗ್ 50 ಸಾವಿರ ರೂ.ಗೆ ಮಾರಾಟ ಆಗಿತ್ತು. ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿತ್ತು. ಸಿದ್ಧಾರ್ಥ್ ನಾಪತ್ತೆಯ ಈ ಎರಡು ದಿನಗಳಲ್ಲಿ ಕಾಫಿ ಉದ್ಯಮದ ವಹಿವಾಟಿನ ಮೇಲೆ ಕರಿನೆರಳು ಬಿದಿತ್ತು. ಈ ದಿನಗಳಲ್ಲೇ ಟೀ ಉದ್ಯಮದಲ್ಲಿ ಗುವಾಹಟಿ ಉತ್ಪನ್ನ ದಾಖಲೆ ಸೃಷ್ಟಿಸಿದ್ದು, ಒಂದು ಕಡೆ ಸಿಹಿ-ಇನ್ನೊಂದು ಕಡೆ ಕಹಿ ಕೊಟ್ಟಂತಿದೆ.
ಅಸ್ಸೋಂ ಕಂಪನಿ ಇಂಡಿಯಾ ಲಿಮಿಟೆಡ್ನ ಮೈಜಾನ್ ಗೋಲ್ಡನ್ ಟಿಪ್ಸ್ ಕೈಯಿಂದ ತಯಾರಿಸಲಾದ ಎರಡು ಕೆಜಿ ಟೀ ಪುಡಿಯನ್ನು ಮುಂಧ್ರಾ ಟೀ ಕಂಪನಿಯು ಯುರೋಪಿಯನ್ ಖರೀದಿದಾರರಿಗಾಗಿ ಕೊಂಡುಕೊಂಡಿದೆ ಎಂದು ಗುವಾಹಟಿ ಟೀ ಹರಾಜು ಖರೀದಿದಾರರ ಸಂಘ (ಜಿಟಿಎಬಿಎ)ದ ಕಾರ್ಯದರ್ಶಿ ದಿನೇಶ್ ಬಿಹಾನಿ ತಿಳಿಸಿದ್ದಾರೆ.
ಅಸ್ಸೋಂ ಟೀ ಇತಿಹಾಸದಲ್ಲಿ ಸಾರ್ವಜನಿಕವಾಗಿ ದಾಖಲೆಯ ಮೊತ್ತಕ್ಕೆ ಟೀ ಪುಡಿ ಗರಿಷ್ಠ ಮೊತ್ತಕ್ಕೆ ಹರಾಜು ಆಗಿದ್ದು ಇದೇ ಮೊದಲು. ಪ್ರತಿ ಕೆಜಿಗೆ ₹ 70,501 ಪಾವತಿಸಿ ಬೆಲ್ಜಿಯಂ ಮೂಲದವರು 2 ಕೆಜಿ ಟೀ ಪುಡಿ ಖರೀದಿಸಿದ್ದಾರೆ ಎಂದು ಬಿಹಾನಿ ಹೇಳಿದ್ದಾರೆ.
ಮೈಜಾನ್ ಗೋಲ್ಡನ್ ಟಿಪ್ಸ್ ಟೀ ಪುಡಿ ಸಂಪೂರ್ಣವಾಗಿ ಕೈಯಿಂದ ಮಾಡಲ್ಪಟ್ಟಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಯಾವುದೇ ಯಂತ್ರಗಳನ್ನು ಬಳಸಲಾಗಿಲ್ಲ ಎಂದು ಅಸ್ಸೋಂ ಕಂಪನಿಯ ಸಿಇಒ ವಿಜಯ್ ಸಿಂಗ್ ತಿಳಿಸಿದ್ದಾರೆ.