ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಯು (ಟ್ರಾಯ್) ದೇಶಿಯ ಮೊಬೈಲ್ ನಂಬರ್ಗಳ ಸಂಖ್ಯೆಯಲ್ಲಿ ಬದಲಾವಣೆ ತರಲು ಇಚ್ಛಿಸಿದೆ ಎಂದು ಮೂಲಗಳ ಹೇಳುತ್ತಿವೆ.
ಇತ್ತೀಚಿನ ವರದಿ ಅನ್ವಯ, ಈಗಿನ 10 ಡಿಜಿಟ್ ಸಂಖ್ಯೆಯನ್ನು 11ಕ್ಕೆ ಏರಿಸಲು ಪ್ರಮುಖ ಕಾರಣ ಹೆಚ್ಚುತ್ತಿರುವ ನಂಬರ್ಗಳ ಬೇಡಿಕೆ. ಯಥೇಚ್ಛ ಪ್ರಮಾಣದಲ್ಲಿ ಮೊಬೈಲ್ ಫೋನ್ಗಳ ಸಂಪರ್ಕ ಸಹ ಏರಿಕೆಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ನಂಬರ್ಗಳ ಹಂಚಿಕೆಯು ಟ್ರಾಯ್ಗೆ ತಲೆನೋವಾಗಿದೆ. ಇದಕ್ಕೆ ಪರಿಹಾರ ಎಂಬಂತೆ 11 ಡಿಜಿಟ್ಗಳ ಸಂಖ್ಯೆಗಳ ಸೇವೆಗೆ ಚಾಲನೆ ನೀಡಲಿದೆ ಎನ್ನಲಾಗುತ್ತಿದೆ.
ಈಗಿನ ಮೊಬೈಲ್ ನಂಬರ್ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಬಳಕೆದಾರರ ಆಯ್ಕೆಯ ಪರದೆಯನ್ನು ವಿಸ್ತರಿಸಲು ಟ್ರಾಯ್ ಬಯಸಿದೆ. 10 ಡಿಜಿಟ್ ಮೊಬೈಲ್ ಸಂಖ್ಯೆಯು 9, 8 ಮತ್ತು 7ರಿಂದ ಆರಂಭವಾಗುತ್ತವೆ. ಪ್ರಸ್ತುತ ಇವುಗಳ ಪ್ರಮಾಣ 2.1 ಬಿಲಿಯನ್ ಸಂಪರ್ಕ ಹೊಂದಿದ್ದು, 2050ರ ವೇಳೆಗೆ ದೇಶದಲ್ಲಿ 2.6 ಬಿಲಿಯನ್ ನಂಬರ್ಗಳ ಅವಶ್ಯಕತೆ ಇದೆ. 1993 ಮತ್ತು 2003ರಲ್ಲಿ ನಂಬರ್ ವ್ಯವಸ್ಥೆಯನ್ನು ಪುನರ್ವಿಮರ್ಶೆಗೆ ಒಳಪಡಿಸಲಾಗಿತ್ತು. ಮತ್ತೆ ನಂಬರ್ಗಳ ವಿಮರ್ಶಗೆ ಟ್ರಾಯ್ ಮುಂದಾಗಿದ್ದು, ಭವಿಷ್ಯದ ಮೊಬೈಲ್ ಸಂಖ್ಯೆ 3, 5, ಮತ್ತು 6ರಿಂದ ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.