ನವದೆಹಲಿ: ಇಂದಿನಿಂದ ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ಆರು ದಿನಗಳ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವರ್ಚುವಲ್ ಶೃಂಗಸಭೆ ಆರಂಭವಾಗುತ್ತಿದ್ದು, ವಿಶ್ವದ ಪ್ರಮುಖ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಭಾಗವಹಿಸುತ್ತಿದ್ದಾರೆ.
2021ರ ಮೊದಲ ಜಾಗತಿಕ ಶೃಂಗಸಭೆ ಇದಾಗಿದ್ದು, ಈ ಸಮ್ಮೇಳನದಲ್ಲಿ ಎಲ್ಲಾ ರಾಜ್ಯ-ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರು, ದೊಡ್ಡ ದೊಡ್ಡ ಕಂಪನಿಗಳ ಸಿಇಒ ಮತ್ತು ಅಧ್ಯಕ್ಷರು, ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 1,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಎದುರಿಸುತ್ತಿರುವ ಆರ್ಥಿಕ, ಪರಿಸರ, ಸಾಮಾಜಿಕ ಮತ್ತು ತಾಂತ್ರಿಕ ಸವಾಲುಗಳನ್ನು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಅಪಾಯಗಳ ವರದಿ 2021
ಜನವರಿ 24 ರಿಂದ 29 ರವರೆಗೆ ಆರು ದಿನಗಳ ಕಾಲ ನಡೆಯುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜ.28) ಭಾಷಣ ಮಾಡಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಪೆಟ್ರೋಲಿಯಂ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಉದ್ಯಮಿಗಳಾದ ಆನಂದ್ ಮಹೀಂದ್ರಾ, ಸಲೀಲ್ ಪರೇಖ್ ಮತ್ತು ಶೋಬಾನಾ ಕಾಮಿನೇನಿ ಕೂಡ ಮಾತನಾಡಲಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯು ತನ್ನ ವಾರ್ಷಿಕ ಶೃಂಗಸಭೆಯಲ್ಲಿ ಮೇ ತಿಂಗಳಲ್ಲಿ ದಾವೋಸ್ ಬದಲಾಗಿ ಈ ಬಾರಿ ಸಿಂಗಪುರದಲ್ಲಿ ಆಯೋಜನೆ ಮಾಡಲಿದೆ.