ನವದೆಹಲಿ: ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಬಹುತೇಕರು ವರ್ಕ್ ಫ್ರಮ್ ಹೋಮ್ ಮಾಡುವಂತಾಗಿದೆ. ಕೊರೊನಾ ಬಳಿಕವೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ ವರ್ಷದಲ್ಲಿ ನಿಗದಿತ ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸುವ ಕರಡು ಸಿದ್ಧಪಡಿಸುತ್ತಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ವರ್ಷದಲ್ಲಿ 15 ದಿನಗಳವರೆಗೆ ಮನೆಯಿಂದಲೇ ಕೆಲಸ ಮಾಡುವ ಅರ್ಹ ಅಧಿಕಾರಿ/ಸಿಬ್ಬಂದಿಗೆ ಆಯ್ಕೆಯನ್ನು ಒದಗಿಸಬಹುದು ಎಂದು ಹೇಳಿದೆ. ಪ್ರಸ್ತುತ, 48,34,000 ಕೇಂದ್ರ ಸರ್ಕಾರಿ ನೌಕರರಿದ್ದಾರೆ.
ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೆ ನೀಡಿದ ಸಂವಹನದಲ್ಲಿ ಸಿಬ್ಬಂದಿ ಸಚಿವಾಲಯವು, ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಹಿನ್ನೆಲೆ ಮನೆಯಿಂದ ಕಾರ್ಯನಿರ್ವಹಿಸಲು ಅನೇಕ ಸಚಿವಾಲಯಗಳಿಗೆ ಅನಿವಾರ್ಯಗೊಳಿಸಿದೆ.
ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳಲು ಈ ವ್ಯವಸ್ಥೆಯನ್ನು ತರಲು ಚಿಂತಿಸಲಾಗಿದೆ. ಇದರ ಕರುಡನ್ನು ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ದೂರುಗಳ ಇಲಾಖೆ ರೂಪಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳು / ಇಲಾಖೆಗಳು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಇ-ಆಫೀಸ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡಿವೆ. ಜೊತೆಗೆ ಅನುಕರಣೀಯ ಫಲಿತಾಂಶಗಳನ್ನು ನೀಡಿವೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಈ ರೀತಿಯ ಕಾರ್ಯ ವಿಧಾನದ ಅನುಭವ ಪಡೆದಿದೆ ಎಂದು ಸಚಿವಾಲಯ ಹೇಳಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಕಾರ್ಯದರ್ಶಿಯು ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಜರಾತಿ ಮತ್ತು ವೇರಿಯಬಲ್ ಕೆಲಸದ ಸಮಯ ಮುಂದುವರಿಸಲಿದೆ ಎಂದು ತಿಳಿಸಿದೆ.