ನವದೆಹಲಿ: ಕೇಂದ್ರ ಸಚಿವ ಸಂಪುಟವು ಇ- ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಅನುಮೋದನೆ ನೀಡಿದ್ದು, ಈಗ ಸಂಸತ್ತಿನ ಅಂಗೀಕಾರವಷ್ಟೇ ಬಾಕಿ ಉಳಿದಿದೆ.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪ ಮಂಡಿಸಿ ಇಲ್ಲವೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬಹುದು. 'ಈ ಕಾಯ್ದೆ ಜಾರಿಯಾದರೇ ಇ- ಸಿಗರೇಟ್ ಉತ್ಪಾದನೆ, ತಯಾರಿಕೆ, ಆಮದು/ರಫ್ತು, ಸಾಗಣೆ, ಮಾರಾಟ, ಹಂಚಿಕೆ, ಸಂಗ್ರಹ ಮತ್ತು ಜಾಹೀರಾತಿನ ಮೇಲೆ ನಿಷೇಧ ಜಾರಿಯಾಗಲಿದೆ ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸಾಂಕ್ರಾಮಿಕ ಹವ್ಯಾಸವನ್ನು ಯುವ ಪೀಳಿಗೆಯಿಂದ ದೂರವಿಡಲು ಜಾರಿಗೆ ತರುವ ಅತ್ಯಗತ್ಯವೆಂದು ಆರೋಗ್ಯ ಸಚಿವಾಲಯ ತನ್ನ ಪ್ರಸ್ತಾವನೆಯಲ್ಲಿ ನಿಷೇಧಕ್ಕೆ ಸ್ಪಷ್ಟನೆ ನೀಡಿತ್ತು.
ಧೂಮಪಾನಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಇ- ಸಿಗರೇಟ್ ಅನ್ನು ನಿಷೇಧಿಸಬೇಕೆ? ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಭಾರತದಲ್ಲಿ ಇ-ಸಿಗರೇಟ್ ತಯಾರಿಕೆಗೆ ಪರವಾನಿಗೆ ನೀಡಿಲ್ಲ. ಕೆಲವರು ಅಕ್ರಮವಾಗಿ ಹೊರ ರಾಷ್ಟ್ರಗಳಿಂದ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಇ-ಸಿಗರೆಟ್‌ಗಳು ತಂಬಾಕನ್ನು ಸುಡುವುದಿಲ್ಲ. ಆದರೆ, ಬಳಕೆದಾರರು ಉಸಿರಾಡುವ ಶಾಸ್ವಕೋಶದ ಮೇಲೆ ನಿಕೋಟಿನ್ ದ್ರವ ಅಪಾಯಕಾರಿ. ಇದು ದಹನಕಾರಿ ಸಿಗರೇಟ್‌ನಿಂದ ಬೇರ್ಪಡಿಸಿ ಶಾಸ್ವಕೋಶದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ.
ಇ- ಸಿಗರೇಟ್ ಚಟಕ್ಕೆ ಅಂಡಿಕೊಂಡವರಿಗೆ ಅದು ಆಹ್ಲಾದಕರ ಎನಿಸುತ್ತದೆ. ಮೂಲದ ಪ್ರಕಾರ, ದೇಶದಲ್ಲಿ 400ಕ್ಕೂ ಅಧಿಕ ಇ- ಸಿಗರೇಟ್ ಬ್ರಾಂಡ್ಗಳಿವೆ. ತಂಬಾಕಿನಲ್ಲಿನ ನಿಕೋಟಿನ್ ಅಂಶ ಒಳಗೊಂಡಿದ್ದು, ಸಿಗರೇಟ್ನಂತೆಯೇ ಚಟವಾಗಿ ಸಕ್ಕರೆ ಕಾಯಿಲೆ, ಶ್ವಾಸಕೋಶ, ಕ್ಯಾನ್ಸರ್ನಂತಹ ರೋಗಕ್ಕೆ ಕಾರಣವಾಗುತ್ತದೆ. ಇ- ಸಿಗರೇಟ್ನಲ್ಲಿ ಜ್ಯೂಸ್ ಎಂದು ಕರೆಯುವ ನಿಕೋಟಿನ್ ಅಂಶ ಅತ್ಯಂತ ಅಪಾಯಕಾರಿಯಾಗಿದೆ. ಈ ನಿಕೋಟಿನ್ ಒಮ್ಮೆ ದೇಹ ಸೇರದಿರೆ ಅದು ವಿಷಕಾರಿಯಾಗುತ್ತದೆ.
ತಂಬಾಕು ಸಂಬಂಧಿತ ಕಾಯಿಲೆಗಳಿಂದ ದೇಶದಲ್ಲಿ ಪ್ರತಿ ವರ್ಷ 9,00,000ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ವಿಶ್ವದಲ್ಲಿ ಭಾರತವು 106 ಮಿಲಿಯನ್ ವಯಸ್ಕ ಧೂಮಪಾನಿಗಳನ್ನು ಹೊಂದಿದ್ದು, ಚೀನಾ ಬಳಿಕ ಎರಡನೇ ಸ್ಥಾನದಲ್ಲಿದೆ.
ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ಇಎನ್‌ಡಿಎಸ್), ಇ-ಸಿಗರೇಟ್, ಶಾಖ- ಸುಡುವ ಸಾಧನಗಳು, ವೈಪ್, ಇ-ಶೀಶಾ, ಇ-ನಿಕೋಟಿನ್ ಹುಕ್ಕಾ ಮತ್ತು ನಿಕೋಟಿನ್ ವಿತರಣೆಯಂತಹ ಸಾಧನಗಳನ್ನು ಮಾರಾಟ ಮಾಡುವುದಾಗಲಿ (ಆನ್‌ಲೈನ್ ಮಾರಾಟ ಸೇರಿದಂತೆ), ತಯಾರಿಸುವುದು, ವಿತರಿಸುವುದು, ಆಮದು ಮಾಡಿಕೊಳ್ಳುವುದು ಹಾಗೂ ಜಾಹೀರಾತು ನೀಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ನೋಟಿಸ್ ಮೂಲಕ ಸೂಚಿಸಿತ್ತು.