ವಾಷಿಂಗ್ಟನ್: ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಸೇಬಿನ ಮೇಲಿನ ಹೆಚ್ಚುವರಿ ಸುಂಕವನ್ನು ಕಡಿತಗೊಳಿಸುವಂತೆ ಒತ್ತಡ ಹೇರಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಸಂಸದರು ಪತ್ರ ಬರೆದಿದ್ದಾರೆ.
ಭಾರತ ತನ್ನ ಸೇಬುಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸುತ್ತಿರುವುದರಿಂದ ಅಮೆರಿಕ ಸೇಬು ಬೆಳೆಗಾರರಿಗೆ ತೀವ್ರವಾದ ಹೊಡೆತ ಬೀಳುತ್ತಿದೆ. ಈ ನಿಟ್ಟಿನಲ್ಲಿ ಸುಂಕ ದರ ಕಡಿಮೆ ಮಾಡುವಂತೆ ನವದೆಹಲಿಯನ್ನು ಕೋರಬೇಕೆಂದು ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿಯ ಪೂರ್ವಭಾವಿಯಾಗಿ ಭಾರತದೊಂದಿಗೆ ವಾಣಿಜ್ಯ-ವಹಿವಾಟು ಸಂಬಂಧ ಮಾತುಕತೆ ನಡೆಸುತ್ತಿರುವ ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಹೈಜರ್ ಅವರಿಗೆ ಕಾಂಗ್ರೆಸ್ ಸದಸ್ಯ ಡಾನ್ ನ್ಯೂಹೌಸ್ ಈ ಕುರಿತು ಪತ್ರ ಬರೆದಿದ್ದಾರೆ. ವಾಷಿಂಗ್ಟನ್ ಸೇಬಿನ ಸುಂಕ ಕಡಿತಕ್ಕೆ ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.
ಸಾಮಾನ್ಯ ಆದ್ಯತಾ ಕಾರ್ಯಕ್ರಮದಿಂದ (ಜಿಎಸ್ಪಿ) ಭಾರತವನ್ನು ಅಮೆರಿಕ ಇತ್ತೀಚೆಗೆ ಹೊರಗಿಟ್ಟಿತ್ತು. ದೊಡ್ಡಣ್ಣನ ಈ ನಿರ್ಧಾರಕ್ಕೆ ಪ್ರತಿಯಾಗಿ ಭಾರತ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ. ವಾಷಿಂಗ್ಟನ್ ಸೇಬು ಮೇಲಿನ ಸುಂಕವನ್ನು ಶೇ 50ರಿಂದ ಶೇ 70ಕ್ಕೆ ಏರಿಸಲಾಗಿತ್ತು. ಭಾರತದ ಈ ನಿರ್ಧಾರದಿಂದ ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಆ್ಯಪಲ್ ಪ್ರಮಾಣ ಕಡಿಮೆಯಾಗಿದೆ.