ನವದೆಹಲಿ: ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ 'ವಿವಾದ್ ಸೆ ವಿಶ್ವಾಸ್ ಮಸೂದೆ-2020'ರ ಅಡಿ ಆಸಕ್ತ ತೆರಿಗೆ ಪಾವತಿದಾರರು ತಮ್ಮ ಮನವಿಗಳನ್ನು ಸಲ್ಲಿಸಬಹುದಾಗಿದೆ.
'ವಿವಾದ್ ಸೆ ವಿಶ್ವಾಸ್' ಯೋಜನೆ (ವಿಎಸ್‌ವಿಎಸ್) ಅಡಿಯಲ್ಲಿ ತೆರಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಬಯಸುವ ತೆರಿಗೆದಾರರು ಇಂದಿನಿಂದ (ಗುರುವಾರ) ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಮ್ಮ ಮನವಿ ಸಲ್ಲಿಸಬಹುದು ಎಂದು ಆದಾಯ ತೆರಿಗೆ ನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಮೇಲ್ಮನವಿ ಆಯುಕ್ತರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳ ಮುಂದೆ 4.8 ಲಕ್ಷಕ್ಕೂ ಹೆಚ್ಚು ನೇರ ತೆರಿಗೆ ವಿವಾದಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿ ಸಿಲುಕಿಕೊಂಡಿದ್ದು, ಈ ಯೋಜನೆಯ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮರುಸಂಗ್ರಹಿಸುವ ಇರಾದೆ ಸರ್ಕಾರ ಹೊಂದಿದೆ.
ವಿವಾದಗಳನ್ನು ಬಗೆಹರಿಸಲು ಇಚ್ಛಿಸುವ ತೆರಿಗೆ ಪಾವತಿದಾರರಿಗೆ ಈ ವರ್ಷದ ಮಾರ್ಚ್ 31ರೊಳಗೆ ವಿವಾದದ ಸಂಪೂರ್ಣ ತೆರಿಗೆಯನ್ನು ಪಾವತಿಸಿದರೆ ಸಂಪೂರ್ಣ ಬಡ್ಡಿ ಮತ್ತು ದಂಡ ಮನ್ನಾದ ಅವಕಾಶವಿರುತ್ತದೆ. ಮಾರ್ಚ್ 31ರ ಬಳಿಕ ಹೆಚ್ಚುವರಿ 10 ಪ್ರತಿಶತದಷ್ಟು ತೆರಿಗೆ ಹೊಣೆಗಾರಿಕೆ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಆದಾಯ ತೆರಿಗೆ, ಸರಕು ವಹಿವಾಟು ತೆರಿಗೆ, ಸೆಕ್ಯುರಿಟೀಸ್ ವಹಿವಾಟು ತೆರಿಗೆ ಮತ್ತು ಸಮೀಕರಣ ತೆರಿಗೆಗೆ ಸಂಬಂಧಿಸಿದ ವಿವಾದಗಳನ್ನು ಒಳಗೊಂಡಿರುವುದಿಲ್ಲ. ಜೂನ್ 30 ರವರೆಗೆ ಈ ಪೋರ್ಟಲ್ ತೆರೆದಿರುತ್ತದೆ.
ವಿಎಸ್‌ವಿಎಸ್ ಅರ್ಜಿ ಭರ್ತಿ ಮಾಡಲು ಮತ್ತು ಮನವಿ ಸಲ್ಲಿಸಲು ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ. incometaxindiaefiling.gov.inನಲ್ಲಿ ಪಾನ್ ನಂಬರ್ ಮೂಲಕ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. 'ವಿವಾದ್ ಸೆ ವಿಶ್ವಾಸ್' ಟ್ಯಾಬ್ ಆಯ್ಕೆಮಾಡಿಕೊಂಡು 'ಪ್ರಿಪೆರ್ ಮತ್ತು ಸಬ್ಮಿಟ್ ಡಿಟಿವಿಎಸ್ವಿ ಫಾರ್ಮ್ಸ್ ಕ್ಲಿಕ್ ಮಾಡಿ ಎಂದು ನೋಂದಣಿ ವಿಧಾನವನ್ನು ಟ್ವೀಟ್ ಮೂಲಕ ಐಟಿ ತಿಳಿಸಿದೆ.
ವಿವಾದ್ ಸೆ ವಿಶ್ವಾಸ್ ಯೋಜನೆ ಪಡೆಯಲು ತೆರಿಗೆದಾರರಿಂದ ಭರ್ತಿ ಮಾಡಬೇಕಾದ ನಿಯಮಗಳು ಮತ್ತು ಐದು ಆನ್‌ಲೈನ್ ಫಾರ್ಮ್‌ಗಳನ್ನು ಸರ್ಕಾರ ಈ ಹಿಂದೆ ತಿಳಿಸಿತ್ತು. ಫಾರ್ಮ್ 1ರಲ್ಲಿನ ಘೋಷಣೆ, ಫಾರ್ಮ್ 2ರಲ್ಲಿನ ಜವಾಬ್ದಾರಿ ಮತ್ತು ಫಾರ್ಮ್ - 4ರಲ್ಲಿ ಪಾವತಿಯ ವಿವರಗಳನ್ನು ತಿಳಿಸಬೇಕಾಗಿದೆ. ಐಟಿಆರ್ ಸಲ್ಲಿಸಲು ಡಿಜಿಟಲ್ ಸಿಗ್ನೇಚರ್ ಅಥವಾ ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಮೂಲಕ ಅನ್ವಯವಾಗುತ್ತದೆ ಎಂದು ಐಟಿ ಇಲಾಖೆ ಹೇಳಿದೆ.