ಮುಂಬೈ: ಕಾರ್ಪೊರೇಟ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ತೆರಿಗೆ ಪರಿಹಾರ ಕ್ರಮಗಳು ದೀರ್ಘಕಾಲಿಕ ಬೆಳವಣಿಗೆಗೆ ಅಗತ್ಯವಾದ ಉತ್ತೇಜಕ ನಡೆಗಳಾಗಲಿವೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಗೋವಾದ ಪಣಜಿಯಲ್ಲಿ ನಡೆದ 37ನೇ ಜಿಎಸ್ಟಿ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶಿಯ ಕಾರ್ಪೊರೇಟ್ ಸಂಸ್ಥೆಗಳಿಗೆ ವಿಧಿಸುವ ತೆರಿಗೆಯನ್ನು ಶೇ 22ಕ್ಕೆ ಇಳಿಸಲಾಗಿದೆ. ಇದರಿಂದ ಸರ್ಕಾರಕ್ಕೆ 1.45 ಲಕ್ಷ ಕೋಟಿ ರೂ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಘೋಷಿಸಿದ್ದರು.
ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋಯಲ್, ನಮ್ಮ ತೆರಿಗೆ ದರಗಳನ್ನು ಅಮೆರಿಕ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ತೆರಿಗೆಗಳಿಗೆ ಸರಿಸಮನಾಗಿವೆಂದು ಹೋಲಿಸಬಹುದು. ತೆರಿಗೆ ವಿನಾಯಿತಿಯು ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಮೆರಿಕದಲ್ಲಿ ಕಾರ್ಪೊರೇಟ್ ತೆರಿಗೆ ಶೇ 21-22 ರಷ್ಟಿದೆ. ಕಳೆದ ಕೆಲವು ವರ್ಷಗಳಿಂದ ಲಭ್ಯವಿರುವ ವಿನಾಯಿತಿಗಳನ್ನು ಬಳಸಿಕೊಂಡು ನಮ್ಮ ತೆರಿಗೆ ದರಗಳನ್ನು ಶೇ 15 ಪ್ರತಿಶತದಷ್ಟು ಕಡಿಮೆ ಮಾಡಿದ್ದೇವೆ ಎಂದು ಗೋಯಲ್ ತಿಳಿಸಿದರು.