ನವದೆಹಲಿ: ರಕ್ಷಣಾ ಕ್ಷೇತ್ರಕ್ಕೆ ನಿಗದಿಪಡಿಸಲಾದ ಅನುದಾನದಲ್ಲಿ ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, 2020-21ನೇ ಹಣಕಾಸು ವರ್ಷದಲ್ಲಿ ₹ 3.37 ಲಕ್ಷ ಕೋಟಿ ಹಂಚಿಕೆ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಈ ಮೊತ್ತ ₹ 3.18 ಲಕ್ಷ ಕೋಟಿ ಇತ್ತು. ಒಟ್ಟಾರೆ ಮೀಸಲಿನಲ್ಲಿ 1.13 ಲಕ್ಷ ಕೋಟಿ ರೂ. ಬಂಡವಾಳ ಉದ್ದೇಶಕ್ಕೆ ನೂತನ ಶಸ್ತ್ರಾಸ್ತ್ರಗಳ ಖರೀದಿ, ಮಿಲಿಟರಿ ಹಾರ್ಡ್‌ವೇರ್ ಹಾಗೂ ಇತರೆ ಖರೀದಿಗೆ ವಿನಿಯೋಗಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪತ್ರದಲ್ಲಿ ತಿಳಿಸಿದ್ದಾರೆ.
ಹಂಚಿಕೆಯಾದ ಮೊತ್ತದಲ್ಲಿ ಸಿಂಹಪಾಲು ಯೋಜನೇತರ ವೆಚ್ಚವಾಗಿದೆ. ಸಿಬ್ಬಂದಿಯ ವೇತನ, ಸೌಲಭ್ಯಗಳ ನಿರ್ವಹಣೆಗೆ ₹ 2.09 ಕೋಟಿ ವಿನಿಯೋಗಿಸಲಿದೆ. ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು.
ಹಂಚಿಕೆಯ ಶೇಕಡಾವಾರು ಜಿಡಿಪಿಯ ಶೇ. 1.5 ರಷ್ಟಿದೆ. ಇದು ತಜ್ಞರ ಪ್ರಕಾರ, 1962ರಲ್ಲಿ ಚೀನಾದೊಂದಿಗಿನ ಯುದ್ಧದ ನಂತರದ ಅತ್ಯಂತ ಕಡಿಮೆ ಮೊತ್ತವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.