ನವದೆಹಲಿ: ಚಿಲ್ಲರೆ ಹಣದುಬ್ಬರ 2020ರ ಜನವರಿಯಲ್ಲಿ ಶೇ. 7.59ಕ್ಕೇರಿಕೆ ಆಗಿದೆ ಎಂಬುದು ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳುತ್ತಿವೆ.
ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕಹಾಕಲಾಗುವ ಚಿಲ್ಲರೆ ಹಣದುಬ್ಬರವು 2019ರ ಡಿಸೆಂಬರ್ನಲ್ಲಿ ಶೇ. 7.35ರಷ್ಟಿತ್ತು. 2020ರ ಜನವರಿಯಲ್ಲಿ ಅದು ಶೇ. 7.59ಕ್ಕೆ ತಲುಪಿದೆ. 2019ರ ಜನವರಿಯಲ್ಲಿ ಇದು ಶೇ. 1.97ರಷ್ಟಿತ್ತು ಎಂದು ತಿಳಿಸಿದೆ.
ಹಿಂದಿನ ಗರಿಷ್ಠ ಮಟ್ಟವು 2014ರ ಮೇ ತಿಂಗಳಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಶೇ. 8.33ರಷ್ಟಿತ್ತು. ಈ ವರ್ಷದ ಜನವರಿಯಲ್ಲಿ ಒಟ್ಟಾರೆ ಆಹಾರ ಹಣದುಬ್ಬರವು ಶೇ. 13.63ರಷ್ಟಿದೆ. ಹಿಂದಿನ ತಿಂಗಳಲ್ಲಿದ್ದ ಶೇ. 14.19ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದಿದೆ.
ಈ ವರ್ಷದ ಜನವರಿಯಲ್ಲಿ ತರಕಾರಿಗಳ ಹಣದುಬ್ಬರವು ಶೇ.50.19ಕ್ಕೆ ಏರಿದರೆ ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳು ಶೇ. 16.71ಕ್ಕೆ ತಲುಪಿದೆ. ಪೋಷಕಾಂಶಯುಕ್ತ ಪದಾರ್ಥಗಳ ಪೈಕಿ ಮಾಂಸ ಮತ್ತು ಮೀನಿನ ಬೆಲೆಗಳು ತಿಂಗಳಲ್ಲಿ ಶೇ. 10.50ರಷ್ಟು ಏರಿಕೆಯಾಗಿದೆ. ಮೊಟ್ಟೆ ಬೆಲೆಗಳು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ.10.41ರಷ್ಟು ಹೆಚ್ಚಾಗಿದೆ.
ಆಹಾರ ಮತ್ತು ಪಾನೀಯಗಳ ವಿಭಾಗವು ಶೇ. 11.79ರಷ್ಟಿದ್ದರೆ, ವಸತಿ ವೆಚ್ಚವು ಶೇ. 4.20ರಷ್ಟು ಏರಿಕೆಯಾಗಿದೆ. ಆದರೆ, ವಿದ್ಯುತ್ ಮತ್ತು ಇಂಧನ ಹಣದುಬ್ಬರ ಶೇ. 3.66ರಷ್ಟಿದೆ ಎಂದು ಹೇಳಿದೆ.