ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ತೆಗೆದುಕೊಳ್ಳದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೇ ವೇಳೆ, ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಡಿಟ್ ನಡೆಸಲು ಐಟಿ ಆಡಿಟ್ ಸಂಸ್ಥೆಯನ್ನು ನೇಮಕ ಮಾಡುವಂತೆಯೂ ತಿಳಿಸಿದೆ.
ಬ್ಯಾಂಕುಗಳ ನಿಯಂತ್ರಣ ಕಾಯ್ದೆ 1949ರ ಅನ್ವಯ ಆರ್‌ಬಿಐ ಈ ಕ್ರಮವನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ತೆಗೆದುಕೊಂಡಿದೆ. ಪೇಮೆಂಟ್ ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನದ ಬಗೆಗಿನ ವ್ಯವಸ್ಥೆಯ ಸಂಪೂರ್ಣ ಆಡಿಟ್ ವರದಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಹೊಸ ಗ್ರಾಹಕರನ್ನು ತೆಗೆದುಕೊಳ್ಳಲು ಆರ್‌ಬಿಐ ಅನುಮತಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: CBSE 10,12ನೇ ತರಗತಿಗೆ ಏಪ್ರಿಲ್ 26ರಿಂದ 2ನೇ ಅವಧಿ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
ಸಂಸ್ಥೆಯ ಹಣಕಾಸು ಸೇವೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಕಳೆದ ಡಿಸೆಂಬರ್‌ನಲ್ಲಿ ಸಂಸ್ಥೆ ಆರ್‌ಬಿಐನಿಂದ ಅನುಮತಿ ಪಡೆದಿತ್ತು. ಸಂಸ್ಥೆಯ ಸ್ಥಾಪಕ ಬಿಲಿಯನೇರ್ ವಿಜಯ್ ಶೇಖರ್ ಶರ್ಮಾ ಅವರು ಪೇಮೆಂಟ್ ಬ್ಯಾಂಕ್‌ನಲ್ಲಿ ಶೇ 51ರಷ್ಟು ಷೇರು ಹೊಂದಿದ್ದಾರೆ.