ನವದೆಹಲಿ: ಕ್ರಿಪ್ಟೋಕರೆನ್ಸಿಗಳು ಆರ್ಥಿಕತೆಯ ಹಣಕಾಸಿನ ಸ್ಥಿರತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳವಳ ಹೊಂದಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿಗಳ ಬಗ್ಗೆ ನಮಗೆ ಕೆಲವು ಪ್ರಮುಖ ಕಾಳಜಿಗಳಿವೆ. ನಾವು ಅವುಗಳ ಕುರಿತು ಸರ್ಕಾರಕ್ಕೆ ತಿಳಿಸಿದ್ದೇವೆ. ಈಗ ಇದು ಸರ್ಕಾರದಲ್ಲಿ ಪರಿಗಣನೆಯಲ್ಲಿದೆ. ಶೀಘ್ರದಲ್ಲೇ ಅಥವಾ ಕೆಲವೇ ದಿನಗಳ ನಂತರ ಸರ್ಕಾರ ಈ ಬಗ್ಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಅಗತ್ಯವಿದ್ದರೆ ಸಂಸತ್ತು ಸಹ ಪರಿಗಣಿನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಿಎನ್‌ಬಿಸಿ-ಟಿವಿ 18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಬ್ಲಾಕ್‌ಚೈನ್ ತಂತ್ರಜ್ಞಾನವು ತೀರಾ ವಿಭಿನ್ನವಾಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಪ್ರಯೋಜನ ಬಳಸಿಕೊಳ್ಳಬೇಕು. ಅದು ಇನ್ನೊಂದು ವಿಷಯ. ಆದರೆ ಕ್ರಿಪ್ಟೋದಲ್ಲಿ ನಮಗೆ ಆರ್ಥಿಕ ಸ್ಥಿರತೆಯ ಕೋನದಿಂದ ಪ್ರಮುಖ ಕಾಳಜಿಗಳಿವೆ. ನಾವು ಅದನ್ನು ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ. ಸರ್ಕಾರ ಪರಿಗಣಿಸಿ ಕರೆ ತೆಗೆದುಕೊಳ್ಳುತ್ತದೆ ಎಂದು ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಸೆಂಟ್ರಲ್ ಬ್ಯಾಂಕ್ ಈ ಹಿಂದೆ ಡಿಜಿಟಲ್ ಕರೆನ್ಸಿಗಳನ್ನು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ನಿಧಿಗೆ ಬಳಸಲಾಗುತ್ತಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು. ಅಧಿಕೃತ ಡಿಜಿಟಲ್ ಕರೆನ್ಸಿಗೆ ಒಂದು ಚೌಕಟ್ಟು ರಚಿಸುವಾಗ ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯವಹರಿಸದಂತೆ ಕಂಪನಿಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಅನ್ನು ಸಂಸತ್ತಿನಲ್ಲಿ ಪರಿಚಯಿಸಲು ಸರ್ಕಾರ ಚಿಂತಿಸುತ್ತಿದೆ.
ಹಲವು ವಂಚನೆಗಳಿಗೆ ಡಿಜಿಟಲ್ ಕರೆನ್ಸಿ ಬಳಸಿದ ನಂತರ ಕ್ರಿಪ್ಟೋ ವಹಿವಾಟು ಬೆಂಬಲಿಸದಂತೆ ಬ್ಯಾಂಕ್ ಮತ್ತು ಇತರ ನಿಯಂತ್ರಿತ ಘಟಕಗಳ ಮೇಲೆ ಆರ್‌ಬಿಐ 2018ರಲ್ಲಿ ನಿಷೇಧಿಸಿತ್ತು. ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ನಿರ್ಬಂಧಗಳನ್ನು ಕಡಿತಗೊಳಿಸಿತು.
ಇದನ್ನೂ ಓದಿ: ಷೇರುಪೇಟೆಯಲ್ಲಿ ಗೂಳಿ ಆರ್ಭಟ: 1,030 ಅಂಕ ಜಿಗಿದ ಸೆನ್ಸೆಕ್ಸ್!
ಆರ್‌ಬಿಐ ತನ್ನದೇ ಆದ ಡಿಜಿಟಲ್ ಕರೆನ್ಸಿ ಪ್ರಾರಂಭಿಸಲು ಸಿದ್ಧವಾಗುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಕೆಲಸ ಪ್ರಗತಿಯಲ್ಲಿದೆ. ಆರ್‌ಬಿಐ ತಂಡವು ಅದರ ಮೇಲೆ ಕೆಲಸ ಮಾಡುತ್ತಿದೆ. ತಂತ್ರಜ್ಞಾನ ಮತ್ತು ಕಾರ್ಯವಿಧಾನದ ಭಾಗವಾಗಿ ಅದನ್ನು ಹೇಗೆ ಪ್ರಾರಂಭಿಸಲಾಗುವುದು ಎಂಬುದನ್ನು ಹೊರತರಲಾಗುವುದು ಎಂದರು.
ಇದು ಸಂಭವಿಸಿದಲ್ಲಿ ಆರ್‌ಬಿಐ ಎಲೆಕ್ಟ್ರಾನಿಕ್ ಯುವಾನ್ ಹೊಂದಿರುವ ಚೀನಾ ಸೇರಿದಂತೆ ಇತರ ಕೇಂದ್ರ ಬ್ಯಾಂಕ್‌ಗಳ ಸಾಲಿಗೆ ಸೇರಲಿದೆ.
ರೋಲ್ ಔಟ್ಗೆ ಯಾವುದೇ ದಿನಾಂಕ ನಿಗದಿಪಡಿಸಲಾಗಿಲ್ಲವಾದರೂ ಯೋಜನೆಯು ನಮ್ಮ ಸಂಪೂರ್ಣ ಗಮನ ಸೆಳೆಯುತ್ತಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.