ನವದೆಹಲಿ: ಖಾಸಗಿ ಅನುಭೋಗ ಬಳಕೆಯಲ್ಲಿನ ಕುಸಿತವು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಅಪಾಯವನ್ನು ಉಂಟುಮಾಡಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ವರದಿಯು ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಆರ್ಥಿಕ ಕುಸಿತದ ನಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಆರ್‌ಬಿಐ ತನ್ನ ಹಣಕಾಸು ನೀತಿ ವರದಿಯಲ್ಲಿ, 2019ರ ಅಕ್ಟೋಬರ್ ತಿಂಗಳಲ್ಲಿ ದೇಶಿಯ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳು ದೇಶದ ಆರ್ಥಿಕ ಚಟುವಟಿಕೆಯನ್ನು ಕುಂಠಿತಗೊಳಿಸಿದೆ ಎಂದು ಹೇಳಿದೆ. ವಿರುದ್ಧ ದಿಕ್ಕಿನಲ್ಲಿ (ಹೆಡ್‌ವಿಂಡ್) ಸಾಗುತ್ತಿರುವ ದೇಶಿಯ ಮತ್ತು ಜಾಗತಿಕ ವಿದ್ಯಮಾನಗಳು ಆರ್ಥಿಕ ಚಟುವಟಿಕೆಯನ್ನು ಖಿನ್ನತೆಗೆ ಒಳಪಡಿಸಿವೆ. ಬೇಡಿಕೆಯ ದೃಷ್ಟಿಯಿಂದ ಭಾರತೀಯ ಆರ್ಥಿಕತೆ ಅಪಾಯಗಳ ಸನಿಹದಲ್ಲಿದೆ ಎಂದು ವರದಿ ತಿಳಿಸಿದೆ.
ದೇಶಿ ಆರ್ಥಿಕತೆಗೆ ಬೆಂಬಲವಾಗಿದ್ದ ಖಾಸಗಿ ಚಟುವಟಿಕೆಗಳ ಅಂಶಗಳು ನಿಧಾನವಾಗಿ ಸಾಗಲು ಆರಂಭಿಸಿವೆ. ಇದೇ ಸಂದರ್ಭದಲ್ಲಿ ವಾಹನ ಮತ್ತು ರಿಯಲ್ ಎಸ್ಟೇಟ್ನಂತಹ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳ ಕಾರ್ಯಕ್ಷಮತೆ ತೃಪ್ತಿದಾಯಕವಾಗಿಲ್ಲ ಎಂದು ಹೇಳಿದೆ.
ಕಾರ್ಪೊರೇಟ್ ತೆರಿಗೆ ದರ ಕಡಿತ, ವಸತಿ ವಲಯಕ್ಕೆ ಉತ್ತೇಜನ, ಮೂಲಸೌಕರ್ಯ ಹೂಡಿಕೆ ನಿಧಿ, ಇ- ಜಿಎಸ್ಟಿ ಮರುಪಾವತಿಯಂತಹ ಅನುಷ್ಠಾನಗಳು ಹಣದ ಹರಿವಿಗೆ ಸಹಾಯಕವಾಗಲಿವೆ ಎಂದಿದೆ. ಬ್ಯಾಂಕ್ಗಳ ಸಾಲ ನೀಡಿಕೆ ಮಂದಗತಿಯಿಂದ ಕ್ರೆಡಿಟ್ ಬೆಳವಣಿಗೆ ಕುಂಠಿತಗೊಳ್ಳಲಿದೆ. ವಾಣಿಜ್ಯ ವಲಯಕ್ಕೆ ನಿಧಿಯ ಹರಿವು ಕಡಿಮೆಯಾಗಿದೆ ಎಂದು ತಿಳಿಸಿದೆ.