ಮಾಮಲ್ಲಪುರಂ (ಚೆನ್ನೈ): ಮಾಮಲ್ಲಪುರದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದ್ವಿಪಕ್ಷೀಯ ವ್ಯಾಪಾರ ಹೆಚ್ಚಿಸುವ ಮಾರ್ಗ ಮತ್ತು ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ಬಗ್ಗೆ ಚರ್ಚಿಸಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಕೆ. ಗೋಖಲೆ ಅವರು, ಉಭಯ ನಾಯಕರು ತಮ್ಮ ರಾಷ್ಟ್ರೀಯ ದೃಷ್ಟಿಕೋನಗಳು ಮತ್ತು ತಮ್ಮ- ತಮ್ಮ ಸರ್ಕಾರದ ಆದ್ಯತೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ ಎಂದರು.
ವ್ಯಾಪಾರ ಸಂಬಂಧಿತ ಮತ್ತು ಆರ್ಥಿಕ ವಿಷಯಗಳ ಕುರಿತು ಕೆಲವು ಚರ್ಚೆಗಳಾಗಿವೆ. ಹೂಡಿಕೆಯ ಕ್ಷೇತ್ರಗಳನ್ನು ಗುರುತಿಸಲು ಪ್ರಯತ್ನಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ಪರಸ್ಪರ ರಾಷ್ಟ್ರಗಳ ಪ್ರೋತ್ಸಾಹ ಮತ್ತು ವ್ಯಾಪಾರದ ಪ್ರಮಾಣದ ಹೆಚ್ಚಳ ಹಾಗೂ ಮೌಲ್ಯ ವೃದ್ಧಿಯತ್ತ ಗಮನ ಹರಿಸಿದ್ದಾರೆ. ವ್ಯಾಪಾರ ಕೊರತೆ ಮತ್ತು ಅಸಮತೋಲಿತ ವ್ಯಾಪಾರದ ಬಗ್ಗೆ ಚರ್ಚೆಯಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ ಎಂದರು.
ಮೋದಿ- ಕ್ಸಿ ಜಿನ್‌ಪಿಂಗ್ ಅವರು, ಭಯೋತ್ಪಾದನೆಯಿಂದ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ. ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ದಿಟ್ಟ ಕ್ರಮ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಚೀನಾ ಬಹು - ಜನಾಂಗೀಯ, ಬಹು - ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕ ಸಾಮಾಜಿಕ ರಾಷ್ಟ್ರಗಳಾಗಿದ್ದು, ಅದರ ಮೇಲೆ ಯಾವುದೇ ವಿಧದ ಪರಿಣಾಮ ಬೀರದಂತೆ ಒಟ್ಟಾಗಿ ಕೆಲಸ ಮಾಡುವ ಆಸೆಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೋಖಲೆ ತಿಳಿಸಿದರು.