ಕರಾಚಿ: ತೀವ್ರ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡು 6 ಬಿಲಿಯನ್ ಡಾಲರ್ ನೆರವಿನ ಖುಷಿಯ ಬೆನ್ನಲ್ಲೇ ಆರ್ಥಿಕ ಆಘಾತ ಎರಗಿದೆ.
ಐಎಂಎಫ್ನಿಂದ ಸಾಲ ನೆರವು ಸಿಕ್ಕ ಬೆನ್ನಲ್ಲೇ ಸಾಗರೋತ್ತರ ಫಾರೆಕ್ಸ್ ಮಾರುಕಟ್ಟೆಯಲ್ಲಿ ಪಾಕ್ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಗುರುವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ 142.25ಕ್ಕೆ ಇಳಿಕೆ ಆಗಿದೆ.
ಕಳೆದ ವಾರ ಡಾಲರ್ ಎದುರು ಪಾಕ್ ರೂ. ವಹಿವಾಟು ₹ 141ನಷ್ಟಿದ್ದರೆ ಈ ವಾರ ಇದು ಸುಮಾರು 5ರಿಂದ 6 ರೂ. ವರೆಗೆ ಇಳಿಕೆ ಆಗಿದೆ. ಮೌಲ್ಯ ಕುಸಿತ ಆಗುತ್ತಿದ್ದಂತೆ ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕರೆನ್ಸಿ ವಿತರಕರ ಜೊತೆ ಚರ್ಚಿಸಲು ಸಭೆ ಕರೆದಿದ್ದಾರೆ.
ಪ್ರಸ್ತುತ ಪಾಕಿಸ್ತಾನ ಕೇಂದ್ರ ಬ್ಯಾಂಕ್ನಿಂದಲೇ ರೂ. ವಿನಿಮಯ ದರ ನಿಯಂತ್ರಣ ಮಾಡಲಾಗುತ್ತಿದೆ. ಈ ನಡುವೆ ಪಾಕ್ ಸರ್ಕಾರ ಕಳೆದ ವಾರ ಐಎಂಎಫ್ ನೊಡನೆ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿದ್ದು ಮಾರುಕಟ್ಟೆ ನಿರ್ಧಾರಿತ ವಿನಿಮಯ ದರವನ್ನು ಅನುಸರಿಸುವುದಾಗಿ ಹೇಳಿತ್ತು.