ಇಸ್ಲಾಮಾಬಾದ್: ಸುಮಾರು ಐದು ತಿಂಗಳ ಕಾಲ ಭಾರತೀಯ ವಿಮಾನಯಾನಗಳಿಗೆ ಪಾಕಿಸ್ತಾನ ತನ್ನ ವಾಯು ಗಡಿ ನಿಷೇಧ ಹೇರಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟ ಎದುರಿಸಿದೆ.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲ್ಕೋಟ್ನಲ್ಲಿನ ಪಾಕ್ ಬೆಂಬಲಿತ ಉಗ್ರರ ತರಬೇತಿ ಶಿಬಿರದ ಮೇಲೆ ಏರ್ಸ್ಟ್ರೈಕ್ ದಾಳಿ ನಡೆಸಿತ್ತು. ಇದಕ್ಕೆ ಹೆದರಿದ ಪಾಕಿಸ್ತಾನ ತನ್ನ ವಾಯು ಗಡಿ ಪ್ರವೇಶಿಸದಂತೆ ಭಾರತಕ್ಕೆ ನಿಷೇಧ ವಿಧಿಸಿತ್ತು.
ಐದು ತಿಂಗಳವರೆಗಿನ ವಾಯು ಪ್ರದೇಶ ನಿಷೇಧದಿಂದ ಪಾಕಿಸ್ತಾನಕ್ಕೆ 344 ಕೋಟಿ ರೂ. (50 ದಶಲಕ್ಷ ಡಾಲರ್) ನಷ್ಟ ಉಂಟಾಗಿದೆ. ಫೆಬ್ರವರಿ 26ರಂದು ಮುಚ್ಚಿದ್ದ ವಾಯುಗಡಿಯನ್ನು ಕಳೆದ ಮಂಗಳವಾರ ನಾಗರಿಕ ವಿಮಾನಯಾನಕ್ಕೆ ಮತ್ತೆ ತೆರೆದಿದೆ.
ಪಾಕ್ ನಿರ್ಧಾರದಿಂದ ಭಾರತದ ರಾಷ್ಟ್ರೀಯ ವಾಯುಯಾನ ಸಂಸ್ಥೆಯಾದ ಏರ್ ಇಂಡಿಯಾಗೆ ₹ 495 ಕೋಟಿ, ಖಾಸಗಿ ಸಂಸ್ಥೆಗಳಾದ ಇಂಡಿಗೋ ₹ 25.1 ಕೋಟಿ, ಸ್ಪೈಸ್ಜೆಟ್ ₹ 30.70 ಕೋಟಿ ಮತ್ತು ಗೋ ಏರ್ ₹ 2.1 ಕೋಟಿಯಷ್ಟು ಅನುಭವಿಸಿದ್ದವು.