ನವದೆಹಲಿ: 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಿಕೊಡುವ ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ವರದಿ ಬಹಿರಂಗವಾಗಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಲಾದ ಮನೆಗಳಲ್ಲಿ ಕೇವಲ ಶೇ 39ರಷ್ಟು ಮನೆಗಳು ಮಾತ್ರ ಹಸ್ತಾಂತರವಾಗಿವೆ. ಪಿಎಂಎವೈ ಅಡಿಯಲ್ಲಿ ಕೈಗೆಟುಕುವ ದರದಲ್ಲಿ ಮನೆಗಳ ನಿರ್ಮಾಣ ಕಾರ್ಯ ತೆವಳುತ್ತಾ ಸಾಗುತ್ತಿದೆ. ಅನುಮೋದನೆಯಾದ 79 ಲಕ್ಷ ಮನೆಗಳಲ್ಲಿ ಸಿಕ್ಕಿದ್ದು ಶೇ 39ರಷ್ಟು ಮಾತ್ರ ಎಂದು ವರದಿ ತಿಳಿಸಿದೆ.
2022ರೊಳಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಲ್ಲದೆ ಗ್ರಾಮೀಣ ಪ್ರದೇಶದ 1 ಕೋಟಿ ಜನರಿಗೆ ಮುಂದಿನ ಐದು ವರ್ಷಗಳಲ್ಲಿ ಮನೆ ನಿರ್ಮಿಸಿ ಕೊಡುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಪ್ರಮುಖ ಏಳು ನಗರಗಳಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸುವ ಪಿಎಂಎ ಯೋಜನೆ ಶೇ 64ರಷ್ಟು ಕುಸಿತಗೊಂಡಿದೆ. 2014ರಲ್ಲಿ 1.95 ಲಕ್ಷ ನಿರ್ಮಾಣವಾಗಿದ್ದರೇ 2018ರಲ್ಲಿ ಅದು 5.45 ಲಕ್ಷಕ್ಕೆ ತಲುಪಿದೆ. ಮನೆಯ ಮಾರಾಟ ಸಹ ಶೇ 28ರಷ್ಟು ಕ್ಷೀಣಿಸಿದೆ. 2014ರ ನಂತರದಲ್ಲಿ 3.23 ಮನೆಗಳು ಮಾರಾಟ ಆಗಿದ್ದರೇ 2018ರಲ್ಲಿ 2.48 ಲಕ್ಷ ಗೃಹಗಳು ಖರೀದಿಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪಿಎಂಎವೈ?
ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದ ಜನರು ₹ 6 ಲಕ್ಷದಿಂದ ₹ 12 ಲಕ್ಷದ ತನಕದ ಗೃಹಸಾಲದ ಬಡ್ಡಿಯಲ್ಲಿ ₹ 2.35 ಲಕ್ಷ ದಿಂದ ₹ 2.67 ತನಕ ಸಬ್ಸಿಡಿ ಪಡೆಯಬಹುದು. ಇದು ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಲು, ಈಗಾಗಲೇ ಕಟ್ಟಿಸಿದ ಮನೆಯನ್ನು ಕೊಳ್ಳಲು ಅಥವಾ ಫ್ಲ್ಯಾಟ್ ಖರೀದಿಯ ಸಾಲಕ್ಕೆ ಅನ್ವಯವಾಗುತ್ತದೆ.