ನವದೆಹಲಿ: 2021-22ರ ಶೈಕ್ಷಣಿಕ ವರ್ಷದಿಂದ ಸೈನಿಕ ಶಾಲೆಗಳಲ್ಲಿ ಶೇ 27ರಷ್ಟು ಸೀಟುಗಳನ್ನು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಿಡಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕ್ ಸ್ಕೂಲ್ಸ್ ಸೊಸೈಟಿ ದೇಶದ 33 ವಸತಿ ಶಾಲೆಗಳನ್ನು ನಿರ್ವಹಿಸುತ್ತದೆ.
2021-22ರಿಂದ ಸೈನಿಕ್ ಶಾಲೆಗಳಲ್ಲಿ ಒಬಿಸಿ ಮೀಸಲಾತಿಯನ್ನು ಪರಿಚಯಿಸಲಾಗುವುದು ಎಂದು ಕುಮಾರ್ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 13ರ ಸುತ್ತೋಲೆಯ ಫೋಟೊ ಪೋಸ್ಟ್ ಮಾಡಿದ್ದು, ಅದನ್ನು ದೇಶದ ಎಲ್ಲಾ ಸೈನಿಕ ಶಾಲೆಗಳ ಪ್ರಾಂಶುಪಾಲರಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಸೈನಿಕ ಶಾಲೆಯಲ್ಲಿ 67 ಪ್ರತಿಶತದಷ್ಟು ಸೀಟುಗಳನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ ಶೇ 33ರಷ್ಟು ಆ ರಾಜ್ಯ ಅಥವಾ ಯುಟಿ ಹೊರಗಿನಿಂದ ಬರುವವರಿಗೆ ಮೀಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರತಿ ಪಟ್ಟಿಯೊಳಗೆ ಶೇ 15ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ, ಶೇ 7.5ರಷ್ಟು ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಶೇ 27ರಷ್ಟು ಸ್ಥಾನಗಳನ್ನು ಕೆನೆರಹಿತ ಪದರ ಒಬಿಸಿಗಳಿಗೆ ಕಾಯ್ದಿರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಮೀಸಲಾತಿ ನೀತಿ 2021-22ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.