ನವದೆಹಲಿ: ಕಡಿಮೆ ವೆಚ್ಚದಲ್ಲಿ ಕಾರು, ಸ್ಕೂಟರ್ ಸೇರಿದಂತೆ ಇತರೆ ವಾಹನಗಳನ್ನು ಖರೀದಿಸುವ ಹೊಸ ವಾಹನ ವಿಮಾ ನಿಯಮಗಳು ಇಂದಿನಿಂದ (ಆಗಸ್ಟ್ 1) ಜಾರಿಗೆ ಬರುತ್ತಿದೆ.
ಸ್ವಂತ ಹಾನಿ (ಒಡಿ) ಮತ್ತು ತೃತೀಯ (ಟಿಪಿ) ಹಾನಿಗಳನ್ನು ಒಳಗೊಂಡಿರುವ ಹೊಸ ದೀರ್ಘಕಾಲೀನ ಮೋಟಾರು ವಿಮಾ ಪ್ಯಾಕೇಜ್ ನಿಲ್ಲಿಸಲಲಾಗಿದೆ. ಈ ಕ್ರಮವು ದೇಶದಲ್ಲಿನ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ರಸ್ತೆ ದರವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ವಿಮಾ ನಿಯಂತ್ರಣ ಪ್ರಾಧಿಕಾರದ (ಐಆರ್‌ಡಿಎಐ) ಪ್ರಕಾರ, 2020ರ ಆಗಸ್ಟ್ 1ರ ನಂತರ ಖರೀದಿಸುವ ವಾಹನಗಳಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ. ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ಈ ಹೊಸ ನಿಯಮ ಜಾರಿಗೆ ತರುತ್ತಿದೆ.
ನೂತನ ವಾಹನಗಳ ಆನ್‌ರೋಡ್ ಬೆಲೆ ಇಳಿಕೆಯಾಗಲಿದೆ. ದ್ವಿಚಕ್ರ ವಾಹನ ಬೆಲೆ ಗರಿಷ್ಠ 5,000 ರೂ. ಹಾಗೂ ಕಾರು, ಸೇರಿದಂತೆ ಇತರ ವಾಹನಗಳ 15,000 ರೂ. ಅಷ್ಟು ಕಡಿಮೆಯಾಗಲಿದೆ.
ಈ ಮೊದಲು ನಾಲ್ಕು ಚಕ್ರಗಳ ಅಥವಾ ದ್ವಿಚಕ್ರ ವಾಹನ ಮಾಲೀಕರು ಮೂರನೇ ವ್ಯಕ್ತಿಯ ವಿಮೆ ಹೊಂದಿರುವುದು ಕಡ್ಡಾಯವಾಗಿತ್ತು (ಕಾರುಗಳಿಗೆ ಮೂರು ವರ್ಷ ಮತ್ತು ಸ್ಕೂಟರ್ / ಬೈಕ್‌ಗಳಿಗೆ ಐದು ವರ್ಷ). ಒಬ್ಬ ವ್ಯಕ್ತಿಯು ದೀರ್ಘಾವಧಿಯ ಸಮಗ್ರ ವಿಮೆಯನ್ನು ಸಹ ಖರೀದಿಸಬಹುದು. ಇದರಲ್ಲಿ ಒಡಿ ಮತ್ತು ಟಿಪಿ ಇರುತ್ತದೆ.
ಈ ಹೊಸ ನಿಯಮವನ್ನು ಜಾರಿಗೊಳಿಸಿದ ಬಳಿಕ ಗ್ರಾಹಕರು ಮೂರು ಅಥವಾ ಐದು ವರ್ಷಗಳ ದೀರ್ಘಾವಧಿಯ ವಿಮೆಯನ್ನು ಸಂಯೋಜಿತ ಸ್ವರೂಪದಲ್ಲಿ ಪಾವತಿಸಬೇಕಾಗಿಲ್ಲ. ಹೊಸ ನಿಯಮವು ವಾಹನ ಮಾಲೀಕರಿಗೆ ಕನಿಷ್ಠ ಒಂದು ವರ್ಷದ ಕಡ್ಡಾಯ ತೃತೀಯ ವಿಮೆಯನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ಗ್ರಾಹಕರು ಒಂದು ವರ್ಷದ ಒಡಿ ಕವರ್ ಅನ್ನು ಸಹ ಆರಿಸಿಕೊಳ್ಳಬಹುದಾಗಿದೆ. 2018ರಲ್ಲಿ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿತ್ತು.
ಹೊಸ ಆದೇಶದಡಿ ಗ್ರಾಹಕರು ಹೆಚ್ಚಿನ ಅವಧಿಯವರೆಗೆ ಒಂದೇ ವಿಮಾ ಪೂರೈಕೆದಾರರಿಗೆ ಅಂಟಿಕೊಳ್ಳಬೇಕಾಗಿಲ್ಲ. ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಇತರ ವಿಮಾದಾರರಿಗೆ ಬದಲಾಯಿಸಬಹುದು.