ನಾಗ್ಪುರ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹಡಗು ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಜಾರಿಗೆ ತಂದಿರುವ ಮೋಟಾರು ವಾಹನ (ತಿದ್ದುಪಡಿ) 2019, ಕಾಯ್ದೆಯ ಗರಿಷ್ಠ ಮೊತ್ತದ ದಂಡದ ನಡೆಯನ್ನು ಸಮರ್ಥಿಸಿಕೊಂಡರು.
ನೂತನ ಮೋಟಾರು ಕಾಯ್ದೆಯ ಹಿಂದಿನ ಆಲೋಚನೆ, ಜನರು ನಿಯಮಗಳಿಗೆ ಅನುಗುಣವಾಗಿರುವುದು ಮತ್ತು ಅವರಿಗೆ ಹೆಚ್ಚು ಮುಖ್ಯವಾದದ್ದು ಜೀವವಾ ಅಥವಾ ಹಣವಾ ಎಂದು ಪ್ರಶ್ನಿಸಿದರು.ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ತಿದ್ದುಪಡಿಯ ಹೊಸ ಕಾನೂನಿನಡಿಯಲ್ಲಿನ ಹೆಚ್ಚಿನ ದಂಡಕ್ಕೆ ಜನರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಉಲ್ಲಂಘಿಸುವವರು ಮಾತ್ರವೇ ದಂಡ ಪಾವತಿಸುತ್ತಿದ್ದಾರೆ. ಕಾನೂನು ಉಲ್ಲಂಘಿಸದಿದ್ದರೆ, ಅವರು ಯಾಕೆ ದಂಡ ಪಾವತಿಸಬೇಕಾಗುತ್ತದೆ? ಎಂದರು.
ಸಿಗ್ನಲ್ ಜಂಪ್ ಮಾಡಿ ಅಡ್ಡಾದಿಡ್ಡಿ ವಾಹನ ಚಲಿಸುತ್ತಿರುವುದರಿಂದ ನಿತ್ಯ ಅಪಘಾತಗಳು ಸಂಭಿಸುತ್ತಿವೆ. ಜನರಿಗೆ ಕಾನೂನಿನ ಬಗ್ಗೆ ಭಯವಿದ್ದರೆ ಆಗ ಮಾತ್ರ ಅವರು ನಿಯಮಗಳನ್ನು ಪಾಲಿಸುತ್ತಾರೆ. ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ, 2019ರ ಅಡಿಯಲ್ಲಿ ಹೆಚ್ಚಿನ ದಂಡ ವಿಧಿಸುವಿಕೆಯನ್ನು ಗಮನಿಸಿದಾಗ ಇಲ್ಲಿ ಹೆಚ್ಚು ಮುಖ್ಯವಾಗಿ ಕಾಣಿಸುವುದು ಜನರ ಜೀವವಾ ಅಥವಾ ಹಣವಾ" ಎಂಬ ಆಯ್ಕೆ ಇದೆ ಎಂದು ಸ್ಪಷ್ಟನೆ ನೀಡಿದರು.
ಈ ಮೊದಲು ಜನರು ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಕಾಯ್ದೆಗಳನ್ನು ಉಲ್ಲಂಘಿಸಿ ಸ್ವಲ್ಪ ಹಣಕೊಟ್ಟು ಪಾರಾಗುಗುತ್ತಿದ್ದರು. ಕಠಿಣವಾದ ನಿಯಮಗಳನ್ನು ತರದ ಹೊರತು ಇಂತಹ ಮನೋವೃತ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಿತಿನ್ ಗಡ್ಕರಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಹೊಸ ತಿದ್ದುಪಡಿ ಕಾಯ್ದೆಯನ್ನ ಸಮರ್ಥಿಸಿಕೊಂಡಿದ್ದಾರೆ.