ನವದೆಹಲಿ: ಐದು ವರ್ಷ ವಿನಾಶಕಾರಿಯಾಗಿ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ಗಮನದ ಹಾದಿ ತೋರಿಸಬೇಕು ಎಂದು ಮಾಜಿ ಪ್ರಧಾನಿ/ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.
ಸುದ್ದಿ ಏಜೆನ್ಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮೋದಿ ಅವರು ತಮ್ಮ ಐದು ವರ್ಷಗಳ ಆಡಳಿತ ಅವಧಿಯನ್ನು 'ಆಘಾತಕಾರಿ ಹಾಗೂ ವಿನಾಶಕಾರಿ'ಯಾಗಿ ಕಳೆದಿದ್ದಾರೆ. ಯುವಕರು, ರೈತರು, ವ್ಯಾಪಾರಿಗಳು ಹಾಗೂ ಪ್ರಜಾಪ್ರಭುತ್ವದ ಪ್ರತಿ ಸಂಸ್ಥೆಗಳು ಅವರಿಗೆ ನಿರ್ಗಮನದ ಹಾದಿ ತೋರಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ ಆಡಳಿತದ ವಿರುದ್ಧ ಹರಿಹಾಯ್ದ ಸಿಂಗ್, ಕಳೆದ ಐದು ವರ್ಷಗಳಲ್ಲಿ ಊಹಿಸಲಾಗದ ಪ್ರಮಾಣದಲ್ಲಿ ಭ್ರಷ್ಟಾಚಾರ ಏರಿಕೆಯಾಗಿದೆ. ನೋಟುರದ್ದತಿ ಸ್ವಾತಂತ್ರ್ಯ ಭಾರತದ ಬಳಿಕ ನಡೆದ ಅತಿ ದೊಡ್ಡ ಹಗರಣವೆಂದು ಜರಿದರು.
ಪಾಕಿಸ್ತಾನದ ಬಗ್ಗೆ ಮೋದಿ 'ಅಜಾಗರೂಕ' (ಸ್ಲಿಪ್ಷೋಡ್) ನೀತಿ ಪಾಲಿಸುತ್ತಿದ್ದಾರೆ. ಇಂತಹ ನೀತಿಯಿಂದ ಪಾಕಿಸ್ತಾನದ ದುರುಳ ಭಯೋತ್ಪದಾಕರನ್ನು ಫಠಾಣ್ಕೋಟ್ನಂತಹ ದಾಳಿಗಳಿಗಳಿಗೆ ಆಹ್ವಾನಿಸಿದಂತಿದೆ ಎಂದು ಅಣಕಿಸಿದರು.
ಬಿಜೆಪಿ ಈ ಚುನಾವಣೆಯನ್ನು ರಾಷ್ಟ್ರೀಯತೆ ಹಾಗೂ ಭಯೋತ್ಪಾದನೆ ಮೇಲೆ ಕೇಂದ್ರೀಕರಿಸಿ ಪ್ರಚಾರ ನಡೆಸುತ್ತಿದೆ. ಪುಲ್ವಾಮಾ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾದರು. ಘಟನೆಯ ತಕ್ಷಣವೇ ಭದ್ರತೆಯ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಸುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಜಿಮ್ಮಿ ಕಾರ್ಬಿಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣವೆಂದು ಹಲವರು ಉಲ್ಲೇಖಿಸಿದ್ದಾರೆ ಎಂದು ಕುಟುಕಿದರು.
ಒಂದು ಸುಳ್ಳನ್ನು ನೂರು ಸಾರಿ ಹೇಳಿದ್ದರೂ ಅದು ಸತ್ಯವಾಗುವುದಿಲ್ಲ. ರಾಷ್ಟ್ರೀಯತೆ ಕುರಿತು ಮಾತನಾಡುವ ಮೋದಿ, ತಮ್ಮ ಆಡಳಿತ ಅವಧಿಯಲ್ಲಿ ಭಯೋತ್ಪಾದನೆ ಜಿಗಿತ ಕಂಡಿದೆ. ರಾಷ್ಟ್ರೀಯ ಭದ್ರತೆ ತೀರ ಕೆಟ್ಟದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಶೇ 176ರಷ್ಟು ಏರಿಕೆಯಾಗಿದೆ. ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ 1000 ಪಟ್ಟು ಹೆಚ್ಚಳವಾಗಿದೆ. ಈ ಐದು ವರ್ಷಗಳಲ್ಲಿ ಬಿಜೆಪಿ ವಿಭಜನೆ ಹಾಗೂ ದ್ವೇಷ ಭಾವನೆಯನ್ನು ಸಮರ್ಪಕವಾಗಿ ಹರಡಿ ಸಾಮಾಜಿಕ ಬಿರುಕುಗಳನ್ನು ಸೃಷ್ಟಿಸಿದೆ ಎಂದು ಮಾಜಿ ಪ್ರಧಾನಿ ಆರೋಪಿಸಿದ್ದಾರೆ.
ಮೋದಿಗೆ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ರಾಜಕೀಯ ಸ್ಥಿರತೆಯೇ ಮುಖ್ಯವಾಗಿದೆ. ಹೀಗಾಗಿ, ಅಧಿಕಾರದಿಂದ ನಿರ್ಗಮನದ ಹಾದಿ ತೋರಿಸುವುದು ಅತ್ಯಗತ್ಯವಾಗಿದೆ ಎಂದರು.