ನವದೆಹಲಿ : ಕೋವಿಡ್-19 ಸೋಂಕಿನಿಂದ ಉಂಟಾದ ಬಹು ವಲಯಗಳ ಅನಿಶ್ಚಿತತೆಯ ಬೆಳವಣಿಗೆ, ಹಾನಿಗೀಡಾದ ಕ್ಷೇತ್ರಗಳ ಉತ್ತೇಜನೆಗೆ ಮುಂಬರುವ ಬಜೆಟ್‌ನಲ್ಲಿ ಸೇರಿಸಬಹುದಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅರ್ಥಶಾಸ್ತ್ರಜ್ಞರು ಮತ್ತು ವಲಯ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.
ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ಆಯೋಜಿಸಿರುವ ವರ್ಚ್ಯುವಲ್ ಸಭೆಯಲ್ಲಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್ ಭಾಗವಹಿಸಲಿದ್ದಾರೆ. ಮುಂದಿನ ಬಜೆಟ್ಗೆ ಅರ್ಥಶಾಸ್ತ್ರಜ್ಞರ ಆಲೋಚನೆ ಹಾಗೂ ಸಲಹೆಗಳನ್ನು ಪಡೆಯಲು ಪ್ರಧಾನಿ ಮೋದಿ ಅವರು ಭೇಟಿಯಾಗಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಧೂಮಪಾನ ಕಾಯ್ದೆಗೆ ತಿದ್ದುಪಡಿ: ಸಿಗರೇಟ್ ಚಿಲ್ಲರೆ ಮಾರಾಟ ನಿಷೇಧ, ದಂಡದ ಪ್ರಮಾಣ ಹೆಚ್ಚಳ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಾರ, 2021ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.5ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.
ಆದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್ ಸಂಕೋಚನದ ಅಂದಾಜನ್ನು ಶೇ.10.3 ಮತ್ತು ಶೇ.9.6ರಷ್ಟರಲ್ಲಿರಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡಿದೆ.
ಉತ್ಪಾದನೆಯಲ್ಲಿನ ಏರಿಕೆಯು ಜಿಡಿಪಿಯ ಶೇ.7.5ರಷ್ಟು ಕಡಿಮೆ ಸಂಕೋಚನಕ್ಕೆ ನೆರವಾಗಲಿದೆ. ಗ್ರಾಹಕರ ಉತ್ತಮ ಬೇಡಿಕೆಯ ಸುಧಾರಣೆಯು ಚೇತರಿಕೆಯಲ್ಲಿ ಭರವಸೆ ತಂದಿದೆ. ಭಾರತದ ಆರ್ಥಿಕ ಬೆಳವಣಿಗೆ 2019-20ರಲ್ಲಿ ಶೇ 4.2 ರಷ್ಟಿತ್ತು. ಮುಂಬರುವ ಕೇಂದ್ರ ಬಜೆಟ್‌ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆಯಿದೆ.