ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2017ರ ಏಪ್ರಿಲ್ 6ರಂದು ಪ್ಲೆನರಿಯಲ್ಲಿ ನಡೆದ 74ನೇ ಅಧಿವೇಶನದಲ್ಲಿ ಜೂನ್ 27 ಅನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ದಿನವೆಂದು ಘೋಷಿಸಿತ್ತು.
ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಮತ್ತು ನಾವೀನ್ಯತೆ ಉತ್ತೇಜಿಸುವಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮಹತ್ವವನ್ನು ಈ ಮುಖೇನ ಯುಎನ್ ಗುರುತಿಸಿತು. ಸೃಜನಶೀಲತೆ ಮತ್ತು ಎಲ್ಲರಿಗೂ ಸುಸ್ಥಿರ ಕೆಲಸ ನೀಡುವಂತಹ ಅವುಗಳ ಪಾತ್ರವನ್ನು ಇತರೆ ಉದ್ಯಮಗಳಿಗೆ ಪರಿಚಯ ಮಾಡಿಸಿಕೊಂಡು ಬರುತ್ತಿದೆ.
ಭಾರತದ 633.88 ಲಕ್ಷ ಎಂಎಸ್‌ಎಂಇಗಳ ಪೈಕಿ 608.41 ಲಕ್ಷ (ಶೇ 95.98ರಷ್ಟು) ಎಂಎಸ್‌ಎಂಇಗಳು ಮಾಲೀಕತ್ವ ಸ್ವಾಮ್ಯದ ಉದ್ಯಮಗಳಾಗಿವೆ. ಇದರಲ್ಲಿ ಪುರುಷ ಮಾಲೀಕತ್ವ ಶೇ 79.63ರಷ್ಟು ಉದ್ಯಮಗಳು ಹಾಗೂ ಶೇ 20.37ರಷ್ಟು ಸ್ತ್ರೀಯರ ಒಡೆತನದಲ್ಲಿವೆ.
2015- 16ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್) 73ನೇ ಸುತ್ತಿನ ಪ್ರಕಾರ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎಂಎಸ್‌ಎಂಇ ವಲಯವು 11.10 ಕೋಟಿ ಉದ್ಯೋಗಗಳನ್ನು ನೀಡುತ್ತಿದೆ. ಉತ್ಪಾದನೆಯಲ್ಲಿ 360.41 ಲಕ್ಷ, ವ್ಯಾಪಾರದಲ್ಲಿ 387.18 ಲಕ್ಷ, ಇತರ ಸೇವೆಗಳಲ್ಲಿ 362.22 ಲಕ್ಷ ಮತ್ತು ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ 0.07 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಉತ್ತರ ಪ್ರದೇಶ ರಾಜ್ಯವು ಅತಿದೊಡ್ಡ ಎಂಎಸ್‌ಎಂಇಗಳ ತಾಣವಾಗಿದ್ದು, ಇದು ದೇಶದ ಶೇ 14.20ರಷ್ಟು ಪಾಲು ಹೊಂದಿದೆ. ಪಶ್ಚಿಮ ಬಂಗಾಳವು ಶೇ 14ರಷ್ಟು ಪಾಲು ಪಾಡೆದಿದೆ. ಅಗ್ರ 10 ರಾಜ್ಯಗಳಲ್ಲಿ ದೇಶದ ಒಟ್ಟು ಎಂಎಸ್‌ಎಂಇಗಳ ಸಂಖ್ಯೆಯ ಶೇ 74.05ರಷ್ಟು ಹೊಂದಿವೆ.
ಎಂಎಸ್‌ಎಂಇಗಳ ಜಾತಿವಾರು ಹಂಚಿಕೆಯಿಂದ ಹೊರತಾಗಿಲ್ಲ. ಒಟ್ಟಾರೆ ಎಂಎಸ್‌ಎಂಇಗಳಲ್ಲಿ ಶೇ 66ರಷ್ಟು ಪರಿಶಿಷ್ಟ ಜಾತಿ (ಶೇ12.5ರಷ್ಟು), ಪರಿಶಿಷ್ಟ ಪಂಗಡ ಶೇ 4.1ರಷ್ಟು ಮತ್ತು ಇತರ ಹಿಂದುಳಿದ ವರ್ಗಗಳದವರು ಶೇ 49.7ರಷ್ಟು ಸಾಮರ್ಥ್ಯ ಪಡೆದಿದ್ದಾರೆ. ಉದ್ಯೋಗದ ಲಿಂಗಾನುಪಾತದಲ್ಲಿ 80 ಪ್ರತಿಶತದಷ್ಟು ಪುರುಷರು ಮತ್ತು ಶೇ 20ರಷ್ಟು ಸ್ತ್ರೀಯರಿದ್ದಾರೆ.
ಭೌಗೋಳಿಕ ವಿತರಣೆಯ ದೃಷ್ಟಿಯಲ್ಲಿ ಭಾರತದ ಏಳು ರಾಜ್ಯಗಳು ಒಟ್ಟಾರೆ ಎಂಎಸ್‌ಎಂಇಗಳಲ್ಲಿ ಶೇ 50ರಷ್ಟು ಪಾಲು ಪಡೆದಿವೆ. ಉತ್ತರ ಪ್ರದೇಶ (ಶೇ14ರಷ್ಟು), ಪಶ್ಚಿಮ ಬಂಗಾಳ (ಶೇ 14ರಷ್ಟು), ತಮಿಳುನಾಡು (ಶೇ 8ರಷ್ಟು), ಮಹಾರಾಷ್ಟ್ರ ( ಶೇ 8ರಷ್ಟು), ಕರ್ನಾಟಕ (ಶೇ 6ರಷ್ಟು), ಬಿಹಾರ (ಶೇ 5ರಷ್ಟು) ಮತ್ತು ಆಂಧ್ರ ಪ್ರದೇಶ (ಶೇ 5ರಷ್ಟು) ಪಾಲು ಹೊಂದಿವೆ. 2019ರ ಮೇ ಅಂತ್ಯದವರೆಗೆ 68.25 ಲಕ್ಷ ಎಂಎಸ್‌ಎಂಇಗಳು ಉದ್ಯೋಗ ಆಧಾರ್ ಮೆಮೊರಾಂಡಮ್ನಲ್ಲಿ ನೋಂದಣಿ ಆಗಿವೆ.
ಕೋವಿಡ್ -19 ಮತ್ತು ಎಂಎಸ್‌ಎಂಇ...
ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತದ 5,000 ಎಂಎಸ್‌ಎಂಇಗಳು ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಇದರಲ್ಲಿ ಶೇ 71ರಷ್ಟು ಕಾರ್ಮಿಕರಿಗೆ 2020ರ ಮಾರ್ಚ್ ತಿಂಗಳ ಸಂಬಳ ನೀಡಲು ಸಾಧ್ಯವಾಗಿಲ್ಲ. ಎಂಎಸ್‌ಎಂಇ ವಲಯದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ನಡಿ ಹಣಕಾಸಿನ ನೆರವು ಘೋಷಿಸಿದೆ. ಇದರಲ್ಲಿ ಶ್ಯೂರಿಟ್ ಇಲ್ಲದೆ ತುರ್ತು ಸಾಲ ನೀಡುವ ಯೋಜನೆ ಪ್ರಮುಖವಾದದ್ದು.
ಎಂಎಸ್‌ಎಂಇಗಳು ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಅತ್ಯಂತ ಕಠಿಣವಾದ ಹೊಡೆತ ತಿಂದಿವೆ. ಪ್ರಸ್ತುತ, ಈ ವಲಯವು 114 ಮಿಲಿಯನ್ ಜನರಿಗೆ ಉದ್ಯೋಗ ಒದಗಿಸುತ್ತದೆ. ಭಾರತದ ಜಿಡಿಪಿಯಲ್ಲಿ ಶೇ 30ರಷ್ಟು ಪಾಲು ನೀಡುತ್ತದೆ. ದೇಶದ ರಫ್ತಿನ ಅರ್ಧದಷ್ಟು ಭಾಗ ಈ ವಲಯದೊಳಗಿನ ಉತ್ಪನ್ನ ಮತ್ತು ಸೇವೆಗಳಿಂದ ಬಂದಿದೆ ಎಂಬುದನ್ನು ನಮೂದಿಸಬಾರದಾಗಿದೆ.
ದೇಶದಲ್ಲಿ ಎಂಎಸ್‌ಎಂಇ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವ್ಯಾಪಾರ- ವಾಣಿಜ್ಯೋದ್ಯಮ ವ್ಯವಹಾರ ಲಾಕ್‌ಡೌನ್ ಬಳಿಕ ನಿಧಾನಕ್ಕೆ ಪುನರಾರಂಭವಾಗಿವೆ. ಉತ್ಪಾದನೆ, ತಯಾರಿಕೆ, ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಾಮಗಾರಿಗಳು ಕಡಿಮೆ ಸಂಖ್ಯೆ ಕಾರ್ಮಿಕ ಕೆಲಸದಿಂದಲೇ ಚೇತರಿಸಿಕೊಳ್ಳಬೇಕಿದೆ. ವಲಸೆ ಕಾರ್ಮಿಕರು ತವರಿಗೆ ವಾಪಸ್ ಆಗಿದ್ದು, ಎಲ್ಲಾ ಉದ್ಯಮಗಳನ್ನು ತೀವ್ರವಾಗಿ ಬಾಧಿಸುತ್ತಿದೆ.
ದೇಶದಲ್ಲಿ ಬಹಳಷ್ಟು ಕಡೆ ಲಾಕ್‌ಡೌನ್ ಸಡಿಲಿಕೆಯಿದ್ದರೂ ಕೋವಿಡ್ ಮುಂಚಿನಂತೆ ಚಟುವಟಿಕೆಗಳು ಚುರುಕು ಪಡೆಯುತ್ತಿಲ್ಲ. ರಾಜ್ಯದ ನಾನಾ ಭಾಗ ಹಾಗೂ ಅನ್ಯ ರಾಜ್ಯಗಳಲ್ಲಿನ ತಮ್ಮ ಊರುಗಳಿಗೆ ಮರಳುತ್ತಿರುವುದು ಎಂಎಸ್‌ಎಂಇ ಹಾಗೂ ಕೈಗಾರಿಕೆ ಮತ್ತು ಮೂಲ ಸೌಕರ್ಯ ವಲಯವನ್ನು ಕಂಗೆಡಿಸಿದೆ. ಲಾಕ್‌ಡೌನ್ ಸಂಪೂರ್ಣ ತೆರವಾದರೂ ಈ ವಲಯಗಳು ಚೇತರಿಸಿಕೊಳ್ಳಲು ಹಲವು ತಿಂಗಳು, ವರ್ಷಗಳೇ ಬೇಕಾಗಬಹುದು.