ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ವ್ಯಾಪ್ತಿಯಲ್ಲಿ ಸುಮಾರು 40.35 ಕೋಟಿ ಫಲಾನುಭವಿಗಳಿದ್ದು, ಈ ಖಾತೆದಾರರನ್ನು ಸೂಕ್ಷ್ಮ ವಿಮಾ ಯೋಜನೆಗಳ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.
ಪಿಎಜೆಡಿವೈ ಖಾತೆದಾರರಿಗೆ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ನೀಡಲಿದೆ.
ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯಡಿ ಕರೆತರುವ ಎನ್‌ಡಿಎ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂಜೆಡಿವೈ ಆರನೇ ವಾರ್ಷಿಕೋತ್ಸವದಂದು ಈ ಪ್ರಕಟಣೆ ಹೊರ ಬಂದಿದೆ.
ಸೂಕ್ಷ್ಮ ವಿಮಾ ಯೋಜನೆಗಳ ಅಡಿಯಲ್ಲಿ ಪಿಎಂಜೆಡಿವೈ ಖಾತೆದಾರರ ವ್ಯಾಪ್ತಿಗೆ ವಿಮಾ ಜೋಡಣೆ ಮಾಡಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಹ ಪಿಎಂಜೆಡಿವೈ ಖಾತೆದಾರರನ್ನು ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಅಡಿಯಲ್ಲಿ ಒಳಗೊಳ್ಳಲು ಮನವಿ ಮಾಡಲಾಗುವುದು. ಈ ಬಗ್ಗೆ ಬ್ಯಾಂಕ್ಗಳಿಗೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ. ಪಿಎಂಜೆಜೆಬಿವೈ ಅಡಿ 18 ರಿಂದ 50 ವರ್ಷದೊಳಗಿನವರಿಗೆ ಬ್ಯಾಂಕ್ ಖಾತೆ ಹೊಂದಿರುವವರಿಗೆ ವಿಮಾ ಸೌಲಭ್ಯ ಲಭ್ಯವಿದೆ. 2 ಲಕ್ಷ ರೂ.ಗಳ ಜೀವಿತಾವಧಿ ಒಂದು ವರ್ಷದ ಅವಧಿಗೆ ಇರುತ್ತದೆ. ನಂತರ ಇದನ್ನು ನವೀಕರಿಸಬಹುದಾಗಿದೆ. ಯಾವುದೇ ಕಾರಣಕ್ಕೂ ವಿಮೆ ಮಾಡಿದವರ ಸಾವಿನ ಸಂದರ್ಭದಲ್ಲಿ ಈ ಯೋಜನೆಯಡಿ 2 ಲಕ್ಷ ರೂ. ಪ್ರೀಮಿಯಂ ವಾರ್ಷಿಕ 330 ರೂ. ಇರಲಿದೆ (ನಿತ್ಯ ಒಂದು ರೂಪಾಯಿಗೂ ಕಡಿಮೆ ಪ್ರೀಮಿಯಂ ಆಗಲಿದೆ). ಚಂದಾದಾರರ ಹಣ ಬ್ಯಾಂಕ್ ಖಾತೆಯಿಂದ ಒಂದು ಕಂತಿನಲ್ಲಿ ಸ್ವಯಂಕೃತವಾಗಿ ಡೆಬಿಟ್ ಆಗುತ್ತದೆ.
ಮತ್ತೊಂದೆಡೆ, ಪಿಎಂಎಸ್‌ಬಿವೈ 18 ರಿಂದ 70 ವರ್ಷದೊಳಗಿನ ಜನರಿಗೆ ಲಭ್ಯವಿದೆ. ಯೋಜನೆಯಡಿ ಆಕಸ್ಮಿಕ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ವಿಮೆ ಸಿಗುತ್ತದೆ. ವಾರ್ಷಿಕ 12 ರೂ ಪ್ರೀಮಿಯಂ ಅನ್ನು ಖಾತೆದಾರರ ಬ್ಯಾಂಕ್ ಖಾತೆಯಿಂದ 'ಆಟೋ ಡೆಬಿಟ್' ಮೂಲಕ ಕಡಿತಗೊಳಿಸಲಾಗುತ್ತದೆ.
ಪಿಎಂಜೆಡಿವೈ ಖಾತೆದಾರರಲ್ಲಿ ರುಪೇ ಡೆಬಿಟ್ ಕಾರ್ಡ್ ಬಳಕೆ ಸೇರಿದಂತೆ ಡಿಜಿಟಲ್ ಪಾವತಿಗಳನ್ನು ಸರ್ಕಾರ ಉತ್ತೇಜಿಸುತ್ತದೆ. ಪಿಎಂಜೆಡಿವೈ ಖಾತೆದಾರರಿಗೆ ಮೈಕ್ರೊ-ಕ್ರೆಡಿಟ್ ಮತ್ತು ಮೈಕ್ರೊ ಹೂಡಿಕೆಗೆ ಅವಕಾಶ ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2014ರ ಆಗಸ್ಟ್ 28ರಂದು ಪಿಎಂಜೆಡಿವೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಪಿಎಂಜೆಡಿವೈ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದವರನ್ನು ಆ ವ್ಯವಸ್ಥೆಗೆ ತಂದಿದೆ. ಭಾರತದ ಆರ್ಥಿಕ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು 40 ಕೋಟಿ ಖಾತೆದಾರರನ್ನು ಆರ್ಥಿಕ ಸೇರ್ಪಡೆಗೆ ತಂದಿದೆ. ಫಲಾನುಭವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಬಹುತೇಕ ಖಾತೆಗಳನ್ನು ಹೊಂದಿದವರು ಗ್ರಾಮೀಣ ಭಾರತದವರು ಇದ್ದಾರೆ.