ಮುಂಬೈ : ಭಾರತೀಯ ಗ್ರಾಹಕರ ದತ್ತಾಂಶವನ್ನು ದೇಶದಲ್ಲೇ ಸಂಗ್ರಹಿಸಿಡಲು ವಿಫಲ ಹಾಗೂ ಮಾನದಂಡಗಳನ್ನು ಪಾಲಿಸದ ಕಾರಣ ಇದೇ ಜುಲೈ 22ರಿಂದ ಜಾರಿಗೆ ಬರುವಂತೆ ಮಾಸ್ಟರ್ ಕಾರ್ಡ್‌ನ ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಗ್ರಾಹಕರ ಸೇವೆಯನ್ನು ಆರ್‌ಬಿಐ ರದ್ದು ಮಾಡಿತ್ತು. ಇದೀಗ ಹೊಸದಾಗಿ ಆಡಿಟ್ ವರದಿಯನ್ನು ಕೇಂದೀಯ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ ಹೊಸ ಕಾರ್ಡ್ ಮೇಲಿನ ನಿಷೇಧವನ್ನು ರದ್ದು ಮಾಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.
ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ವಿರುದ್ಧ ಈಗಾಗಲೇ ಕ್ರಮಕೈಗೊಂಡಿರುವ ಆರ್‌ಬಿಐ, ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಭಾರತದಲ್ಲೇ ಸಂಗ್ರಹಿಸುವ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸಾಕಷ್ಟು ಸಮಯಾವಕಾಶ ನೀಡಿತ್ತು. ಆದರೂ ಸಂಸ್ಥೆ ದತ್ತಾಂಶ ಸಂಗ್ರಹದ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳದಿರುವುದು ಈ ಹಿಂದೆ ಆರ್‌ಬಿಗೆ ಸಲ್ಲಿಸಲಾಗಿದ್ದ ಸಿಸ್ಟಮ್ ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: ಗ್ರಾಹಕರ ದತ್ತಾಂಶ ಭಾರತದಲ್ಲೇ ಸಂಗ್ರಹಿಸಿಡಲು ವಿಫಲ ; ಮಾಸ್ಟರ್ ಕಾರ್ಡ್‌ಗೆ ಆರ್‌ಬಿಐ ಶಾಕ್
ಏಪ್ರಿಲ್‌ನಲ್ಲಿ ಮಾಸ್ಟರ್‌ಕಾರ್ಡ್‌ನ ಲೆಕ್ಕ ಪರಿಶೋಧನೆಯ 'ಸಿಸ್ಟಮ್ ಆಡಿಟ್ ವರದಿ' ಅತೃಪ್ತಿಕರವಾಗಿದೆ ಎಂದು ನಿರ್ಧರಿಸಿದ ನಂತರ ಆರ್‌ಬಿಐ ನಿಷೇಧವನ್ನು ಹೇರಿತು. ಆರ್‌ಬಿಐ ಹೊಸ ವರದಿಯನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾಸ್ಟರ್ ಕಾರ್ಡ್‌ನ ಆಡಿಟ್ ಕಂಪನಿ ಡೆಲಾಯ್ಟ್ ಪೂರಕ ಲೆಕ್ಕಪರಿಶೋಧನೆಯನ್ನು ಮಾಡಿದೆ. ನಿಷೇಧವನ್ನು ಘೋಷಿಸಿದ 6 ದಿನಗಳ ನಂತರ ಜುಲೈ 20ರಂದು ಆರ್‌ಬಿಐಗೆ ಹೊಸ ವರದಿಯನ್ನು ಸಲ್ಲಿಸಲಾಗಿದೆ.
ನಾವು ಆರ್‌ಬಿಐ ಜೊತೆಗಿನ ನಮ್ಮ ಮಾತುಕತೆ ಮುಂದುವರಿಸಲು ನಿರೀಕ್ಷಿಸುತ್ತೇವೆ ಹಾಗೂ ನಮ್ಮ ಜವಾಬ್ದಾರಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ಗೌಪ್ಯತೆಯ ಜವಾಬ್ದಾರಿಗಳನ್ನು ಉಲ್ಲೇಖಿಸಿರುವ ಡೆಲಾಯಿಟ್ ಸಂಸ್ಥೆ ಪ್ರತಿಕ್ರಿಯಿಗೆ ಆರ್‌ಬಿಐ ಪ್ರತಿಕ್ರಿಯಿಸಲಿಲ್ಲ.