ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‌ಬಿಐ) 938 ಕೋಟಿ ರೂ. ಸಾಲ ವಂಚನೆ ಮಾಡಿರುವ ಆರೋಪದಡಿ ಸಿಬಿಐ ಮಧ್ಯಪ್ರದೇಶದ ಮೊರೆನಾ ಮೂಲದ ಕೆಎಸ್ ಆಯಿಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಮೇಶ ಚಂದ್ರ ಗರ್ಗ್ ಸೇರಿದಂತೆ ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊರೆನಾದಲ್ಲಿನ ಕಾರ್ಖಾನೆ ಮತ್ತು ನೋಂದಾಯಿತ ಕಚೇರಿ, ರಮೇಶ ಚಂದ್ರ ಗರ್ಗ್ ಮತ್ತು ಇನ್ನೊಬ್ಬ ನಿರ್ದೇಶಕ ಸೌರಭ್ ಗರ್ಗ್ ಅವರ ನಿವಾಸ ಮತ್ತು ನವದೆಹಲಿಯ ಬಾರಾಖಂಬಾ ರಸ್ತೆಯಲ್ಲಿರುವ ಕಂಪನಿಯ ಕಚೇರಿಗೆ ಸೇರಿದ ಐದು ಕಡೆ ದಾಳಿ ಮಾಡಲಾಗಿದ್ದು, ಕಡತಗಳ ಶೋಧಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯ ಇನ್ನೊಬ್ಬ ನಿರ್ದೇಶಕ ದೇವೇಶ್ ಅಗರ್ವಾಲ್ ಅವರ ಮೇಲೆಯೂ ಸಿಬಿಐ ಪ್ರಕರಣ ದಾಖಲಿಸಿದೆ. ಆದರೆ, ಅವರಿಗೆ ಸಂಬಂಧಿಸಿದಂತೆ ಪ್ರದೇಶದಲ್ಲಿ ಯಾವುದೇ ಶೋಧ ಕಾರ್ಯ ನಡೆದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಲದ ಮೊತ್ತವನ್ನು ಮೋಸದ ಜಾಲದ ಮೂಲಕ ಕಂಪನಿಯು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವಿದೆ ಎಂದು ಸಿಬಿಐ ವಕ್ತಾರ ಆರ್.ಕೆ. ಗೌರ್ ಹೇಳಿದ್ದಾರೆ.