ನವದೆಹಲಿ: ಚಿಟ್ ಫಂಡ್ಗಳ ವಿತ್ತೀಯ ಮಿತಿಯನ್ನು ಮೂರು ಪಟ್ಟು ಹೆಚ್ಚಿಸುವ ಹಾಗೂ ಕಮಿಷನ್ ದರವನ್ನು ಶೇ 5ರಿಂದ ಶೇ 7ಕ್ಕೆ ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.
ಚಿಟ್ ಫಂಡ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬಡವರ ಮತ್ತು ಮಧ್ಯಮ ವರ್ಗದ ಹಿತಾಸಕ್ತಿ ಕಾಪಾಡುವ 2019ರ ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಮಸೂದೆ ಪರಿಚಯಿಸಿದ ಬಳಿಕ ಮಾತನಾಡಿದ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು, ಬಡವರ ಹಿತಕಾಯುವ ಹಾಗೂ ಅವರು ಮೋಸ ಹೋಗದಂತೆ ತಡೆಯುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಮುಂಬರುವ ವರ್ಷದಲ್ಲಿ 15,000 ಅಧಿಕ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಚಂದಾದಾರ ಆಧಾರಿತ ಚಿಟ್ ಫಂಡ್ ಕಾನೂನುಬದ್ಧವಾಗಿದೆ. ಚಿಟ್ ಫಂಡ್ ನೋಂದಾಯಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ. ಪ್ರಧಾನ್ ಮಂತ್ರಿ ಜನ ಧನ್ ಯೋಜನೆ, ಯುಪಿಐ ಪಾವತಿ, ಡಿಜಿಟಲ್ ವಹಿವಾಟು ಮತ್ತು ರುಪೇ ಡೆಬಿಟ್ ಕಾರ್ಡ್‌ಗಳ ಬಗ್ಗೆ ಉಲ್ಲೀಖಿಸಿದ ಸಚಿವರು, ಹೆಚ್ಚಿನ ಸಂಖ್ಯೆಯ ಜನರನ್ನು ಬ್ಯಾಂಕ್ ಖಾತೆಗಳ ಮೂಲಕ ಆರ್ಥಿಕ ಪಾಲುದಾರಿಕೆಯ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.
ಮಸೂದೆಯ ಪ್ರಕಾರ, ಓರ್ವ ವ್ಯಕ್ತಿ ಅಥವಾ ನಾಲ್ಕು ಜನಕ್ಕಿಂತ ಕಡಿಮೆ ಪಾಲುದಾರಿಕೆಯ ನಿರ್ವಹಣೆಯ ಗರಿಷ್ಠ ಚಿಟ್ ಮೊತ್ತವನ್ನು ₹ 1 ಲಕ್ಷದಿಂದ ₹ 3 ಲಕ್ಷದವರೆಗೆ ಮತ್ತು ನಾಲ್ಕು ಅಥವಾ ಹೆಚ್ಚಿನ ಪಾಲುದಾರರನ್ನು ಹೊಂದಿರುವ ಸಂಸ್ಥೆಗಳಿಗೆ ₹ 6 ಲಕ್ಷದಿಂದ ₹ 18 ಲಕ್ಷಕ್ಕೆ ಏರಿಸಲು ಉದ್ದೇಶಿಸಲಾಗಿದೆ. ಚಿಟ್ ನಿರ್ವಹಣೆ ಜವಾಬ್ದಾರಿ ಹೊಂದಿರುವ 'ಫೋರ್‌ಮ್ಯಾನ್'ಗೆ ಗರಿಷ್ಠ ಕಮಿಷನ್ ಶೇ 5ರಿಂದ ಶೇ 7ಕ್ಕೆ ಏರಿಸಲಾಗಿದೆ ಎಂದರು.