ನವದೆಹಲಿ: ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರು-ಒಬುವಳವರಿಪಲ್ಲಿ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಮಧ್ಯೆ ದೇಶದ ಅತಿ ಉದ್ದನೆಯ ವಿದ್ಯುದೀಕರಣಗೊಂಡ ರೈಲಿನ ಸುರಂಗ ಮಾರ್ಗವು ಭಾರತೀಯ ರೈಲ್ವೆ ಇಲಾಖೆಯ ಗೇಮ್ ಚೇಂಜರ್ ಎಂದು ಹೇಳಲಾಗುತ್ತಿದೆ.
ಕೃಷ್ಣಪಟ್ಟಣ - ಒಬುಳವರಿಪಲ್ಲಿ ನಡುವಿನ 112 ಕಿ.ಮೀ. ಉದ್ದದ ನೂತನ ಮಾರ್ಗದಲ್ಲಿ ಅದಿರು ಮತ್ತು ಕೈಗಾರಿಕೆ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗುವಂತೆ ₹ 1,993 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರೈಲು ಮಾರ್ಗದ ಭಾಗವಾಗಿಯೇ 6.7 ಕಿ.ಮೀ. ಮತ್ತು ಒಂದು ಕಿ.ಮೀ. ಉದ್ದದ ಎರಡು ಸುರಂಗ ಮಾರ್ಗಗಳನ್ನು ಗುಡೂರ್ ಬಳಿ ನಿರ್ಮಿಸಲಾಗಿದೆ.
ದೇಶದ ಅತಿ ಉದ್ದದ ವಿದ್ಯುದ್ದೀಕೃತ ರೈಲ್ವೆ ಸುರಂಗವು ಪ್ರಮುಖ ವಿತ್ತೀಯ ಪ್ರಯೋಜನಗಳನ್ನು ಪಡೆಯಲು ನೆರವಾಗಲಿದೆ. ಕೃಷ್ಣಪಟ್ಟಣಂ ಬಂದರು ದೇಶದ ಅತಿ ದೊಡ್ಡ ಖಾಸಗಿ ಬಂದರಾಗಿದ್ದು, ಗ್ರಾಹಕ ಸ್ನೇಹಿ ಎಂಬ ಹೆಗ್ಗಳಿಕೆ ಸಹ ಪಡೆದಿದೆ. ಭಾರತದ ಪೂರ್ವ ಕರಾವಳಿಯ ಅತಿದೊಡ್ಡ ಖಾಸಗಿ ಬಂದರು, ದೇಶದ 2ನೇ ಅತಿ ದೊಡ್ಡ ಬಂದರು, 3ನೇ ಅತಿ ದೊಡ್ಡ ಕಲ್ಲಿದ್ದಲು ಮತ್ತು ಖಾದ್ಯ ತೈಲ ನಿರ್ವಹಣೆ ಬಂದರು, ಭಾರತದ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಂಟೈನರ್ ಟರ್ಮಿಲ್ ಸೇರಿದಂತೆ ಹಲವು ಹೆಗ್ಗಳಿಕೆ ಸಹ ಇದಕ್ಕಿದೆ.
ಕಲ್ಲಿದ್ದಲು, ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ರಸಗೊಬ್ಬರದಂತಹ ವಾಣಿಜ್ಯ ಸರಕುಗಳನ್ನು ಇದೇ ಮಾರ್ಗದಲ್ಲಿ ಸಾಗಿಸಲಾಗುತ್ತದೆ. ಪ್ರತಿ ರೇಕ್ (ಪ್ರತಿ ರೇಕ್ 3,200 ಮೆಟ್ರಿಕ್‌ಟನ್) ಕಲ್ಲಿದಲು ಸಾಗಣೆಯ ವೆಚ್ಚದಲ್ಲಿ ₹ 3 ಲಕ್ಷದಿಂದ ₹ 7 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ಅದೇ ರೀತಿ ರಸಗೊಬ್ಬರ ₹ 1.5 ರಿಂದ ₹ 2.5 ಲಕ್ಷ, ಉಕ್ಕು ₹ 6 ಲಕ್ಷ ಹಾಗೂ ಸುಣ್ಣದ ಕಲ್ಲು ಸಾಗಣೆಯ ಮೇಲೆ ₹ 5.25 ಲಕ್ಷದ ವರೆಗೆ ಉಳಿತಾಯವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ವೆಂಕಟಾಚಲಂ-ಒಬುವಳವರಿಪಲ್ಲಿ ಮತ್ತು ಕೃಷ್ಣಪಟ್ಟಣಂ ಬಂದರಿನ ನಡುವೆ ನೇರ ಸಂಪರ್ಕ ಇದೆ. ಈ ಸುರಂಗ ನಿರ್ಮಾಣಕ್ಕೂ ಮೊದಲು ಸರಕು ರೈಲುಗಳು ಹೆಚ್ಚುವರಿಯಾಗಿ 72 ಕಿ.ಮೀ. ಮಾರ್ಗವನ್ನು ಪಶ್ಚಿಮಾಭಿಮುಖವಾಗಿ ಸುತ್ತಿಕೊಂಡು ಬರಬೇಕಿತ್ತು. ಈಗ ಪ್ರಯಾಣದ ಅವಧಿಯು 10 ಗಂಟೆಯಿಂದ 5 ಗಂಟೆಗೆ ಇಳಿಕೆಯಾಗಿದೆ. ಗುಂತಕಲ್ ವಿಭಾಗದಿಂದ ನಿತ್ಯ ಸುಮಾರು 12 ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.