ನವದೆಹಲಿ: ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತದ 10 ಸ್ಥಾನ ಕೆಳಗಿಳಿದು 68ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಕಂಡುಬಂದ ಆರ್ಥಿಕ ಸುಧಾರಣೆಗಳಿಂದ ಸಿಂಗಾಪುರ್ ಅಮೆರಿಕವನ್ನು ಹಿಂದಿಕ್ಕೆ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದಿದೆ.
ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಈ ವರ್ಷದ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 68ನೇ ಸ್ಥಾನ ಪಡೆದಿದೆ. ಕಳೆದ ವರ್ಷ 58ನೇ ಸ್ಥಾನದಲ್ಲಿತ್ತು. ಬ್ರಿಕ್ಸ್ ಸದಸ್ಯರಾಷ್ಟ್ರಗಳಲ್ಲಿ ಅತ್ಯಂತ ಕೆಟ್ಟ ಪ್ರವೃತ್ತಿಯನ್ನು ಬ್ರೆಜಿಲ್ (71 ಸ್ಥಾನ) ಜೊತೆಗೆ ಭಾರತ ಸಹ ಪ್ರದರ್ಶಿಸಿದೆ.
ಜಗತ್ತಿನ 140 ರಾಷ್ಟ್ರಗಳನ್ನು ವಿಶ್ವ ಆರ್ಥಿಕ ವೇದಿಕೆ ಸಮೀಕ್ಷೆಗೆ ಆಯ್ದುಕೊಂಡಿದೆ. ಇದರಲ್ಲಿ ಸಿಂಗಾಪುರ್ ಮೊದಲ ಸ್ಥಾನದಲ್ಲಿದ್ದರೇ ಅಮೆರಿಕ ನಂತರದಲ್ಲಿದೆ. ಏಷ್ಯಾ ರಾಷ್ಟ್ರಗಳಿಗಿಂತ ಭಾರತ ಉತ್ತಮ ಶ್ರೇಣಿ ಪಡೆದಿದೆ. ಶ್ರೀಲಂಕಾ- 84, ಬಾಂಗ್ಲಾ- 105, ನೇಪಾಳ- 108 ಮತ್ತು ಪಾಕ್ 110ನೇ ಸ್ಥಾನದಲ್ಲಿವೆ.
ಭಾರತ ಕಳೆದ ಒಂದು ವರ್ಷದಲ್ಲಿ 10 ಸ್ಥಾನಗಳನ್ನು ಕಳೆದುಕೊಂಡು 68ನೇ ಸ್ಥಾನಕ್ಕೆ ಇಳಿದಿರುವುದು ನಾಟಕೀಯ ಬೆಳವಣಿಗೆಯಾಗಿದೆ. ಆದರೆ. ದೇಶದ ಸ್ಪರ್ಧಾತ್ಮಕತೆಯ ಅಂಕಗಳಲ್ಲಿ ತುಲನಾತ್ಮಕ ಕುಸಿತ ಕಂಡುಬಂದಿದೆ ಎಂದು ಡಬ್ಲ್ಯುಇಎಫ್ ಹೇಳಿದೆ. ಕೊಲಂಬಿಯಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ಸೇರಿದಂತೆ ಇದೇ ರೀತಿಯ ಸ್ಥಾನದಲ್ಲಿರುವ ಹಲವು ಆರ್ಥಿಕತೆಗಳು ಕಳೆದ ವರ್ಷದಲ್ಲಿ ಸುಧಾರಣೆ ಕಂಡಿವೆ. ಹೀಗಾಗಿಯೇ ಭಾರತ ಕುಸಿತ ಕಂಡು ಅವುಗಳು ಹಿಂದಿಕ್ಕಿವೆ.